ನೇಕಾರರ ಪುನರುಜ್ಜೀವನದ ಬಗ್ಗೆ ಕಾಳಜಿ ತೋರದ ಸರ್ಕಾರ: ಟಿರ್ಕಿ
ಮಹಾಲಿಂಗಪುರ 14: ರಾಜ್ಯದಲ್ಲಿ ನೇಕಾರರ ಸರಣಿ ಆತ್ಮಹತ್ಯೆ ಮುಂದುವರೆದು, ಸರ್ಕಾರ ಅವರ ಪುನರುಜ್ಜೀವನದ ಬಗ್ಗೆ ಕಾಳಜಿ ತೋರದೇ ಮೊಂಡು ವಾದವನ್ನು ಮುಂದುವರೆಸಿರುವುದಕ್ಕೆ ಇಡೀ ನೇಕಾರ ಸಮುದಾಯ ಅವರಿಗೆ ಧಿಕ್ಕಾರ ಹೇಳುತ್ತಿದೆ ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ ಹೇಳಿದರು.
ಬನಹಟ್ಟಿ, ಮಹಾಲಿಂಗಪುರ ನಗರಗಳಲ್ಲದೇ ಇಡೀ ರಾಜ್ಯದಲ್ಲಿ ಸಾಲಬಾಧೆಯಿಂದ ನೇಕಾರರು ನಿರಂತರ ನೇಣಿಗೆ ಶರಣಾಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ತಾರತಮ್ಯ ನೀತಿ ಹಾಗೂ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಖಂಡಿಸಿ ಮೃತರ ಪರಿವಾರಗಳಿಗೆ ಶೀಘ್ರ ಪರಿಹಾರ ನೀಡುವಂತೆ ಇತ್ತೀಚೆಗೆ ಮೃತನಾದ ಮಲ್ಲಪ್ಪ ಯಡಪ್ಪನವರ್ ಭಾವಚಿತ್ರ ಹಿಡಿದು ಪ್ರತಿಭಟಿಸಿ ಸ್ಥಳೀಯ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿಯವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದುವರೆ ವರ್ಷದ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನೇಕಾರರು ಸಾಲಬಾಧೆ ಹಾಗೂ ಸಮರ್ಕ ಕೂಲಿ, ಕಚ್ಚಾಮಾಲು, ಕೈತುಂಬ ಕೆಲಸ ಸಿಗದೆ ಆರ್ಥಿಕ ದಿವಾಳಿಯೆದ್ದು ಇಲ್ಲಿಯವರೆವಿಗೂ ಸುಮಾರು 25 ಜನ ನೇಕಾರ ಬಂಧುಗಳು ನೇಣಿಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇವರ ನೆರವಿಗೂ ಧಾವಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.
ಉಪನಿರ್ದೇಶಕರ ಭೇಟಿ : ನತದೃಷ್ಟ ನೇಕಾರ ದಿ.ಮಲ್ಲಪ್ಪ ಅದೃಶ್ಯಪ್ಪ ಯಡಪ್ಪನವರ್ ಮನೆಗೆ ಬಾಗಲಕೋಟ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲಪ್ಪ ಕೊಣ್ಣೂರ ಹಾಗೂ ಸತೀಶ ಕಮಲದಿನ್ನಿ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಂಡು, ನೇಕಾರರು ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಇಳಿಯಬಾರದು. ಏನೇ ಬಿಕ್ಕಟ್ಟುಗಳು ಬಂದರೂ ಅದನ್ನು ತಾಳ್ಮೆಯಿಂದ ಬಗೆಹರಿಸಿಕೊಂಡು ಸಮಸ್ಯೆಗಳನ್ನು ಎದುರಿಸಬೇಕೆಂದು ಪರಿವಾರಕ್ಕೆ ಧೈರ್ಯ ತುಂಬಿದರು. ಪ್ರಸ್ತುತ ಮಾಹಿತಿಯ ವರದಿಯನ್ನು ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸಂಗಪ್ಪ ಜಮಖಂಡಿ, ಅಡಿವೆಪ್ಪ ಹುಣಶ್ಯಾಳ, ದಾನ ಪ್ರಮಾಣಗಳ ಯಡಪ್ಪನವರ, ಶಶಿಕಾಂತ ಜಗದಾಳ, ಚನ್ನಪ್ಪ ಹುಣಶ್ಯಾಳ, ಪ್ರಕಾಶ ಬಿಲಕುಂದ, ಪ್ರಕಾಶ ಮರೇಗುದ್ದಿ, ಮಹಾಲಿಂಗ ನಡಕಟ್ನಿ, ರಾಜೇಂದ್ರ ಮಿರ್ಜಿ, ಭರತ ಕದ್ದಿಮನಿ, ಧನಂಜಯ ಜೀರಗಾಳ, ಆನಂದ ಪಂಕಿ, ರಾಜ ಹಣಗಂದೆ, ಅಭಿಷೇಕ ಸೊನ್ನದ, ಮಹೇಶ ಚಂಡೋಲ, ಬಸವರಾಜ ಮುಗಳಖೋಡ, ಸೋಮಶೇಖರ ಮರೇಗುದ್ದಿ ಇತರರು ಇದ್ದರು.