ಯರಗಟ್ಟಿ ಕ್ಷೇತ್ರಕ್ಕೆ ಪ್ರತ್ಯೇಕ ಹೆಸ್ಕಾಂ ವಿಭಾಗ ರಚನೆಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ
ಲೋಕದರ್ಶನ ವರದಿ
ಯರಗಟ್ಟಿ 01: ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಪ್ರತ್ಯೇಕ ಹೆಸ್ಕಾಂ ವಿಭಾಗ ರಚನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ವಿಶ್ವಾಸ ವೈದ್ಯ ಅವರು, ಬೈಲಹೊಂಗಲ ಹೆಸ್ಕಾಂ ವಿಭಾಗದಿಂದ ಸವದತ್ತಿ ಉಪವಿಭಾಗವನ್ನು ಬೇರಿ್ಡಸಿ ಸ್ವತಂತ್ರ ಹೆಸ್ಕಾಂ ವಿಭಾಗ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಸವದತ್ತಿ ಉಪವಿಭಾಗವು ಸವದತ್ತಿ ಹಾಗೂ ಯರಗಟ್ಟಿ ತಾಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, 131 ಗ್ರಾಮಗಳು, 45 ಗ್ರಾಮ ಪಂಚಾಯಿತಿಗಳು, ಒಂದು ನಗರಸಭೆ, ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯನ್ನು ಹೊಂದಿರುವ ವಿಶಾಲ ಪ್ರದೇಶವಾಗಿದೆ. ಈ ಭಾಗದಲ್ಲಿ 1.29 ಲಕ್ಷಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳು, 102 ಎಚ್‌ಟಿ ಸ್ಥಾವರಗಳು, 16 ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ 10,055 ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ.