ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದ ಜಾರ್ಜಿಯಾ ಮೆಲೋನಿ, ಐತಿಹಾಸಿಕ ಸಾಧನೆಗೈದ ಇವರ್ಯಾರು?
ರೋಮ್: ಸೆಪ್ಟೆಂಬರ್ ೨೮: ಬಲಪಂಥೀಯ ಬ್ರದಸ್ ಆಫ್ ಇಟಲಿ ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜುಲೈನಲ್ಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ರಾಷ್ಟ್ರೀಯ ಏಕತಾ ಸರ್ಕಾರವನ್ನು ಒಳಜಗಳಗಳು ಉರುಳಿಸಿದ ನಂತರ ಭಾನುವಾರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಎರಡನೇ ಮಹಾಯುದ್ಧದ ನಂತರ ಇಟಲಿಯ ಅತ್ಯಂತ ಬಲಪಂಥೀಯ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜಾರ್ಜಿಯಾ ಅವರ ಪಕ್ಷ, ಬ್ರದರ್ಸ್ ಆಫ್ ಇಟಲಿ ಸುಮಾರು 25 ಪ್ರತಿಶತ ಮತಗಳನ್ನು ಗಳಿಸುವುದರೊಂದಿಗೆ ದೊಡ್ಡ ಗೆಲುವು ಸಾಧಿಸಿದೆ.
ಜಾರ್ಜಿಯಾ ಮೆಲೋನಿ
ತಂದೆಯ ಪ್ರೀತಿಯಿಂದ ದೂರವಾಗಿ ತಾಯಿಯ ಆರೈಕೆಯಲ್ಲಿ ಮಾತ್ರ ಬೆಳೆದ ಜಾರ್ಜಿಯಾ 15 ನೇ ವಯಸ್ಸಿನಲ್ಲಿ ಇಟಾಲಿಯನ್ ಸೋಶಿಯಲ್ ಮೂವ್‌ಮೆಂಟ್ (MSI) ನ ಸ್ಥಳೀಯ ಯುವ ಘಟಕಕ್ಕೆ ಸೇರ್ಪಡೆಗೊಂಡರು. ಇದನ್ನು ಅಪಮಾನಿತ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯ ಬೆಂಬಲಿಗರು ರಚಿಸಿದರು.
ಮೆಲೋನಿಯವರು ೨೧ ನೇ ವಯಸ್ಸಿನಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪಾದರ್ಪಣೆ ಮಾಡಿದರು. ಬೆರ್ಲುಸ್ಕೋನಿಯ 2008ರಲ್ಲಿ ಸರ್ಕಾರದಲ್ಲಿ ಸಚಿವರಾಗಿ ಖಾತೆಯನ್ನು ಪಡೆದಾಗ ಅವರಿಗೆ ಕೇವಲ 31 ವಯಸ್ಸು. ಈ ಮೂಲಕ ಇಟಲಿಯ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1990 ರ ದಶಕದ ಮಧ್ಯಭಾಗದಲ್ಲಿ, ಟಾಲಿಯನ್ ಸೋಶಿಯಲ್ ಮೂವ್‌ಮೆಂಟ್ ರಾಷ್ಟ್ರೀಯ ಒಕ್ಕೂಟ (AN) ಎಂಬ ಹೊಸ ಸಂಘಟನೆಯ ಭಾಗವಾಯಿತು. ನಂತರ ಮಾಜಿ ಪ್ರಧಾನ ಮಂತ್ರಿ ಸಿಲ್ವಿಯೊ ಬೆರ್ಲುಸ್ಕೋನಿ ರಚಿಸಿದ ಮುಖ್ಯವಾಹಿನಿಯ ಸಂಪ್ರದಾಯವಾದಿ ಗುಂಪಿನೊಂದಿಗೆ ವಿಲೀನಗೊಂಡಿತು.
2012 ರಲ್ಲಿ, ಮೆಲೋನಿ ಮತ್ತು AN ನ ಇತರ ಸದಸ್ಯರು ಗುಂಪನ್ನು ತೊರೆದರು ಮತ್ತು ಬ್ರದರ್ಸ್ ಆಫ್ ಇಟಲಿಯನ್ನು ಸಹ-ಸ್ಥಾಪಿಸಿದರು. ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಮೆಲೋನಿ ತನ್ನ ಪಕ್ಷವನ್ನು ಯುಎಸ್ ರಿಪಬ್ಲಿಕನ್ ಪಕ್ಷ ಮತ್ತು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷಕ್ಕೆ ಹೋಲಿಸಿದ್ದಾರೆ. ಪಕ್ಷವು ದೇಶಭಕ್ತಿ ಮತ್ತು ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುತ್ತದೆ.