ಚಿನ್ನದ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿ ಅರ್ಧ ಕೆಜಿ ಚಿನ್ನ, 2.80 ಲಕ್ಷ ನಗದು ಹಣ ದೋಚಿದ ಖದೀಮರ ತಂಡ : ಇಬ್ಬರು ವ್ಯಾಪಾರಿಗಳು ಆಸ್ಪತ್ರೆಗೆ ದಾಖಲು

ಚಿನ್ನದ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿ ಅರ್ಧ ಕೆಜಿ ಚಿನ್ನ, 2.80 ಲಕ್ಷ ನಗದು ಹಣ ದೋಚಿದ ಖದೀಮರ ತಂಡ : ಇಬ್ಬರು ವ್ಯಾಪಾರಿಗಳು ಆಸ್ಪತ್ರೆಗೆ ದಾಖಲು

 ಬೆಗಾವಿ, ಸೆ, 18 :  8 ಜನರು ಡಕಾಯಿತರಿದ್ದ ಖದೀಮರ ತಂಡವು ಚಿನ್ನದ ವ್ಯಾಪಾರಿಗಳನ್ನು ರಸ್ತೆ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿ ಅರ್ಧ ಕೆ.ಜಿ ಚಿನ್ನಾಭರಣ ಹಾಗೂ 2.80 ಲಕ್ಷ ನಗದು ಹಣ ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ಜಿಲ್ಲೆಯ ಗೋಕಾಕ ತಾಲೂಕಿನ  ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

  ಚಿನ್ನದ ವ್ಯಾಪಾರಿಗಳಾದ ಸಂಜೀವ ಸದಾನಂದ ಪೋತದಾರ ಮತ್ತು ಆತನ ಸಹೋದರ ರವೀಂದ್ರ ಸದಾನಂದ ಪೋತದಾರ ಹಲ್ಲೆಗೆ ಒಳಗಾದವರಾಗಿದ್ದಾರೆ. ಇವರು ಗೋಕಾಕದಲ್ಲಿರುವ ತಮ್ಮ ಅಂಗಡಿ ಬಂದ್ ಮಾಡಿ ತಮ್ಮ ಸ್ವಗ್ರಾಮ ಶಿಂಧಿಕುರಬೇಟಕ್ಕೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ವಾಪಸಾಗುವ ವೇಳೆ ಘಟಪ್ರಭಾ ಸಕ್ಕರೆ ಕಾರ್ಖಾನೆ ಹತ್ತಿರ 4 ದ್ವಿಚಕ್ರ ವಾಹನಗಳ ಮೇಲೆ 8 ಜನ ದರೋಡೆಕೋರರ ತಂಡವು ಚಿನ್ನದ ವ್ಯಾಪಾರಿಗಳ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಾಪಾರಿಗಳ ಬಳಿ ಇದ್ದ  ಬ್ಯಾಗನ್ನು ಕಸಿದುಕೊಂಡಿದ್ದಾರೆ. ಚಿನ್ನದ ಬ್ಯಾಗ್ ನೀಡದ ವ್ಯಾಪಾರಿಗಳ ಮೇಲೆ ಕಬ್ಬಿಣ ರಾಡಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

   ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯರಾತ್ರಿಯೇ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಚಿನ್ನದ ವ್ಯಾಪಾರಿಗಳು ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸುದ್ದಿ ಓದಿ