ನೈಜೀರಿಯಾದಲ್ಲಿ ನರಮೇಧ: ಕನಿಷ್ಠ 110 ನಾಗರಿಕರು ಬಲಿ
ಅಬುಜಾ,
ನ 30: ಈಶಾನ್ಯ ನೈಜೀರಿಯಾದಲ್ಲಿ ನಡೆದ ಘೋರ ಹತ್ಯಾಕಾಂಡದಲ್ಲಿ ಬಹುತೇಕ ರೈತರು ಸೇರಿದಂತೆ
110 ಜನರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ವರದಿ ಮಾಡಿದ್ದಾರೆ.
ವರದಿಗಳಂತೆ, ಸಂಘರ್ಷ ಪೀಡಿತ ಬೊರ್ನೊ ರಾಜ್ಯದ ರಾಜಧಾನಿಯಾದ ಮೈಡುಗುರಿ ಬಳಿಯ ಜೆರೆ ಸ್ಥಳೀಯ ಸರ್ಕಾರಿ ಪ್ರದೇಶದ ಕೊಶೋಬೆ ಗ್ರಾಮ ಮತ್ತು ಇತರ ಗ್ರಾಮೀಣ ಸಮುದಾಯಗಳಲ್ಲಿ ಶನಿವಾರ ಮಧ್ಯಾಹ್ನ ಈ ಹತ್ಯೆಗಳು ನಡೆದಿವೆ ಎಂದು ಅಲ್ ಜಜೀರಾ ಮಾಧ್ಯಮ ವರದಿ ಮಾಡಿದೆ.
‘ಮೋಟಾರ್ ಸೈಕಲ್‌ಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹೊಲಗಳನ್ನು ಕೊಯ್ಲು ಮಾಡುತ್ತಿದ್ದ ನಾಗರಿಕ ಪುರುಷರು ಮತ್ತು ಮಹಿಳೆಯರ ಮೇಲೆ ಕ್ರೂರ ದಾಳಿ ನಡೆಸಿದ್ದಾರೆ.’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲದೆ, ಅನೇಕ ಮಹಿಳೆಯರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ದಾಳಿಯ ಹೊಣೆಯನ್ನು ಇದರುವರೆಗೆ ಯಾರೂ ಹೊತ್ತಿಲ್ಲ. ಆದರೆ ಸಶಸ್ತ್ರ ಬೊಕೊ ಹರಮ್ ಸಂಘಟನೆ ಮತ್ತು ಅದರ ಬೇರ್ಪಟ್ಟ ಬಣ, ಪಶ್ಚಿಮ ಆಫ್ರಿಕಾ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಡಬ್ಲ್ಯುಎಪಿ) ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಮಾರಣಾಂತಿಕ ಸರಣಿ ದಾಳಿಗಳನ್ನು ನಡೆಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಈ ಪ್ರದೇಶದಲ್ಲಿ ಎರಡೂ ಗುಂಪುಗಳು ಸಕ್ರಿಯವಾಗಿವೆ. ಕಳೆದ ಎರಡು ದಶಕಗಳಲ್ಲಿ ಸಶಸ್ತ್ರ ಕಾರ್ಯಾಚರಣೆಗಳ ಮೂಲಕ ಈ ತಂಡಗಳು 30,000 ಕ್ಕೂ ಹೆಚ್ಚು ಜನರನ್ನು ಕೊಂದಿವೆ. ಇವರ ಭೀತಿಯಿಂದ ಸುಮಾರು 20 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ನೈಜರ್, ಚಾಡ್ ಮತ್ತು ಕ್ಯಾಮರೂನ್ ಸೇರಿದಂತೆ ನೆರೆಯ ರಾಷ್ಟ್ರಗಳಿಗೂ ಇವರ ಹತ್ಯಾ ಕಾರ್ಯಾಚರಣೆಗಳು ಹಬ್ಬಿವೆ.