ರಾಷ್ಟ್ರೀಯ

ಗಣಪತಿ ವಿಸರ್ಜನೆ ಮೆರವಣಿಗೆ ವಿವಾದ: ಥಾಣೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, 70-80 ಮಂದಿ ವಿರುದ್ಧ ಪ್ರಕರಣ

ಗಣಪತಿ ವಿಸರ್ಜನೆ ಮೆರವಣಿಗೆ ವಿವಾದ: ಥಾಣೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, 70-80 ಮಂದಿ ವಿರುದ್ಧ ಪ್ರಕರಣ

ಥಾಣೆ, ಸೆ. 21 : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಟಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಮೆರವಣಿಗೆ ಸಾಗುವ ಕ್ರಮದ ವಿಚಾರವಾಗಿ ಬಿಜೆಪಿ ಕಾರ್ಪೊರೇಟರ್ ಉಮೇಕ್ಷಾ ಭೋಯರ್ ಮತ್ತು ಠಾಕ್ರೆ ಬಣದ ನಾಯಕ ಸುರೇಶ್ ಭೋಯರ್ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 19ರಂದು ಮಧ್ಯರಾತ್ರಿ ಟಿಟ್ವಾಲಾದ ರಿಜೆನ್ಸಿ ಸರ್ವಂ, ಶ್ರೀಕೃಷ್ಣ ಆಸ್ಪತ್ರೆ ರಸ್ತೆ, ಎಂಎನ್‌ಎಸ್ ಚೌಕ್ ಮತ್ತು ಸ್ಟೇಷನ್ ರಸ್ತೆಯ ಪ್ರದೇಶಗಳಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಎರಡೂ ಗುಂಪುಗಳು ಒಂದರ ಹಿಂದೆ ಮತ್ತೊಂದು ಮೆರವಣಿಗೆ ಸಾಗಿಸಲು ಮುಂದಾದಾಗ ವಿವಾದ ಆರಂಭವಾಯಿತು. ಬಳಿಕ ವಾಗ್ವಾದ, ನಿಂದನೆ, ತಳ್ಳಾಟ ಮತ್ತು ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿದ್ದು, ಕೆಲಕಾಲ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಯಿತು.

ಈ ಘಟನೆ ಹಿಂದಿನ ಚುನಾವಣೆಗಳಿಂದ ಉಂಟಾದ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗಿದೆ ಎಂದು ಉಮೇಕ್ಷಾ ಭೋಯರ್ ಆರೋಪಿಸಿದ್ದಾರೆ. ಅಲ್ಲದೆ, ಗಣಪತಿ ವಿಸರ್ಜನೆಗಾಗಿ ತಾನು ಸುಮಾರು ಮೂರು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಅವರು ಹೇಳಿದ್ದಾರೆ. ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಸುರೇಶ್ ಭೋಯರ್ ಅವರ ಕುಟುಂಬದ ಸದಸ್ಯರು ತಮ್ಮನ್ನು ಕಿರುಕುಳ ನೀಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ್ ತಾಲೂಕು ಪೊಲೀಸರು ಎರಡೂ ಗುಂಪುಗಳ ಸುಮಾರು 70ರಿಂದ 80 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಶಕ್ತಿಮಾನ್ ಭೋಯರ್, ಉಮೇಕ್ಷಾ ಭೋಯರ್, ಪ್ರದೀಪ್ ಭೋಯರ್ ಮತ್ತು ಸುರೇಶ್ ಭೋಯರ್ ಸೇರಿದಂತೆ ಹಲವರ ಹೆಸರುಗಳಿವೆ.

ಸೆಪ್ಟೆಂಬರ್ 11ರಂದು ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿರುವುದು, ಅನುಮತಿಯಿಲ್ಲದೆ ಧ್ವನಿವರ್ಧಕಗಳನ್ನು ಬಳಸಿರುವುದು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುದ್ದಿ ಓದಿ