ಸರಳ ನವರಾತ್ರಿ ಆಚರಿಸಿ, ಉಳಿಸಿದ ಹಣವನ್ನು ಬರಪೀಡಿತ ರೈತರ ನೆರವಿಗೆ ಬಳಸಿ: ಶಿಂಧೆ
ಮುಂಬೈ, ಅ. 1 : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂಬರುವ ನವರಾತ್ರಿ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಜನರು, ಶಿವಸೇನಾ ಪದಾಧಿಕಾರಿಗಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಹಬ್ಬಗಳ ಆಚರಣೆಯಲ್ಲಿ ಉಳಿಸುವ ಹಣವನ್ನು ಬರಪೀಡಿತ ರೈತರ ನೆರವಿಗೆ ಬಳಸುವಂತೆ ಅವರು ಕರೆ ನೀಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಿಂಧೆ, ರಾಜ್ಯದ ಹಲವು ಪ್ರದೇಶಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
“ಈ ವರ್ಷ ಮಳೆ ನಮ್ಮ ಕೈಹಿಡಿದಿಲ್ಲ. ಪ್ರಕೃತಿಯು ತನ್ನ ರೌದ್ರರೂಪವನ್ನು ತೋರಿಸಿದೆ. ಹಲವು ಪ್ರದೇಶಗಳಲ್ಲಿ ಬೆಳೆಗಳು ಒಣಗಿವೆ ಹಾಗೂ ನಿಂತಿದ್ದ ಬೆಳೆಗಳು ನೆಲಕ್ಕುರುಳಿವೆ,” ಎಂದು ಅವರು ತಿಳಿಸಿದ್ದಾರೆ.
ತೀವ್ರ ಬರ ಪರಿಸ್ಥಿತಿಯಿಂದ ಸಾವಿರಾರು ರೈತರು ಸಂಕಷ್ಟದಲ್ಲಿದ್ದು, ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ಸಮಾಜ ನಿಲ್ಲುವುದು ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಶಿಂಧೆ ಹೇಳಿದ್ದಾರೆ.
“ರಾಜ್ಯದ ಬೊಕ್ಕಸದ ಮೇಲೆ ಮೊದಲ ಹಕ್ಕು ನಮ್ಮ ರೈತರದ್ದೇ ಎಂದು ನಾನು ಯಾವಾಗಲೂ ಹೇಳುತ್ತ ಬಂದಿದ್ದೇನೆ,” ಎಂದು ಅವರು ತಿಳಿಸಿದರು. ಮಹಾಯುತಿ ಸರ್ಕಾರ ಹಾಗೂ ಶಿವಸೇನಾ ರೈತರ ಬೆಂಬಲಕ್ಕೆ ದೃಢವಾಗಿ ನಿಂತಿವೆ ಎಂದರು.
ಸರ್ಕಾರ ತನ್ನಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸಮಾಜವೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ರೈತರು ಆರ್ಥಿಕ ಹಾಗೂ ಬೆಳೆ ನಷ್ಟದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುವುದು ಸೂಕ್ತವಲ್ಲ ಎಂದು ಶಿಂಧೆ ಹೇಳಿದರು.
ಶಿವಸೇನಾ ಪದಾಧಿಕಾರಿಗಳು, ಸಾಮಾಜಿಕ ಸಂಘಟನೆಗಳು ಹಾಗೂ ನಾಗರಿಕರು ನವರಾತ್ರಿ ಸೇರಿದಂತೆ ಮುಂಬರುವ ಹಬ್ಬಗಳು, ಸಮಾರಂಭಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸುವಂತೆ ಅವರು ಮನವಿ ಮಾಡಿದರು.
ಹಬ್ಬಗಳ ಆಚರಣೆಯಲ್ಲಿ ಉಳಿಯುವ ಹಣವನ್ನು ಬರಪೀಡಿತ ರೈತರ ನೆರವು ಮತ್ತು ಪುನರ್ವಸತಿಗೆ ನೀಡುವಂತೆ ಅವರು ಸಂಘಟಕರಿಗೆ ಕರೆ ನೀಡಿದರು.
“ಈ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಅನ್ನದಾತರೊಂದಿಗೆ ದೃಢವಾಗಿ ನಿಂತರೆ, ಈ ನೈಸರ್ಗಿಕ ವಿಪತ್ತನ್ನು ಖಂಡಿತವಾಗಿ ಎದುರಿಸಬಹುದು,” ಎಂದು ಶಿಂಧೆ ಹೇಳಿದರು.
ಈ ವರ್ಷದ ಹಬ್ಬಗಳ ಆಚರಣೆಯಲ್ಲಿ ಉಳಿಸುವ ಹಣವು ರೈತರ ಕಣ್ಣೀರು ಒರೆಸಿ ಅವರ ಬದುಕಿನಲ್ಲಿ ಸಂತಸ ಮೂಡಿಸಲು ನೆರವಾದರೆ, ಅದುವೇ ದೇವಿ ಜಗದಂಬೆಯ ನಿಜವಾದ ಸೇವೆಯಾಗಲಿದೆ ಎಂದು ಅವರು ಹೇಳಿದರು.