ಬೆಳಗಾವಿ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದ್ದ ಜಿ.ಭಗವಂತಪ್ಪನವರು

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದ್ದ ಜಿ.ಭಗವಂತಪ್ಪನವರು


ಹಾರೂಗೇರಿ  09: ಜಿ.ಭಗವಂತಪ್ಪ ಕರ್ಣವಾಡಿ ಅವರು ತಮ್ಮ ಸಂಪತ್ತು ಮತ್ತು ಶಕ್ತಿಯನ್ನು ಸ್ವಂತ ಬದುಕಿನ ಸುಖಕ್ಕಾಗಿ ಬಳಸದೇ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದಾರೆ ಎಂದು ಮುಖ್ಯಾಧ್ಯಾಪಕ ಟಿ.ಬಿ.ಸಾಜನೆ ಹೇಳಿದರು. 

   ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರಗತಿ ಪ್ರೌಢಶಾಲೆ, ಭಗವಾನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಭಗವಾನ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಶಾಂತಲಾ ಸಂಗೀತ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜಿ.ಭಗವಂತಪ್ಪ ಕರ್ಣವಾಡಿ ಅವರ 25ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

  ಜಿ.ಭಗವಂತಪ್ಪ ಕರ್ಣವಾಡಿ ಅವರ ಸಮಾಜಮುಖಿ ಮತ್ತು ಶೈಕ್ಷಣಿಕ ಸಾಧನೆಯನ್ನು ಮುಂದಿ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅವರು ಶಿಕ್ಷಕರಾಗಿ ಸ್ವಾರ್ಥಕ್ಕಾಗಿ ಬದುಕದೇ, ಬಡವರು, ಹಿಂದುಳಿದ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು.

ಅಂತ ಮಹಾನ್ ಚೇತನರ ಜೀವನ ಇಂದಿನ ಶಿಕ್ಷಕ ಸಮುದಾಯಕ್ಕೆ ಆದರ್ಶವಾಗಿದೆ ಎಂದರು.  ಪಿಯು ಕಾಲೇಜು ಪ್ರಾಚಾರ್ಯ ಸ್ವಪ್ನಿಲ್ ಸಾಜನೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಬೃಹತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಲಕ್ಷ್ಯಾಂತರ ಮಕ್ಕಳ ಭವಿಷ್ಯ ರೂಪಿಸಿದ್ದಾರೆ ಎಂದರು.  

 ಸಂಸ್ಥೆ ಅಧ್ಯಕ್ಷ ಭೀಮಗೌಡ ಕರ್ಣವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡುವ ಮೂಲಕ ಸಂಸ್ಥೆ ಹಾಗೂ ಸಂಸ್ಥಾಪಕರಿಗೆ ಗೌರವ ಸಲ್ಲಿಸಬೇಕೆಂದರು.  ಪ್ರಾಚಾರ್ಯ ಸುಭಾಸ್ ಭರಮರಾವುತ, ಪಾರೀಸ್ ನಾಗನೂರ, ಉಮೇಶ ಬಾಳಿಕಾಯಿ, ಎಸ್‌.ಬಿ.ಕಲ್ಯಾಣಿ, ಕರೆಪ್ಪ ಪೂಜೇರಿ, ಗಂಗಾಧರ ಕುಲಕರ್ಣಿ, ಎಸ್‌.ಡಿ.ಕಾಗವಾಡೆ, ಕೆ.ಎಸ್‌.ಚೌಗಲಾ, ಎ.ಜೆ.ಚೌಗಲಾ ಮೊದಲಾದ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ