ಜು.22 ರಿಂದ 24 ರವರೆಗೆ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರವೇಶ ನಿಷೇಧ
ಕೊಪ್ಪಳ, ಜು.20 ಕೋವಿಡ್-19 ಸೋಂಕು ಹರಡುವಿಕೆ ತಡೆಯುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ತಾಲ್ಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಜು. 22 ರ ಸಾಯಂಕಾಲ 6 ಗಂಟೆಯಿಂದ ಜು. 24 ರ ಮಧ್ಯರಾತ್ರಿ 12 ಗಂಟೆಯವರೆಗೆ ಭಕ್ತಾದಿಗಳ ಪ್ರವೇಶ ನಿಷೇಧಿಸಿ ಉಪ ವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಆದೇಶ ಹೊರಡಿಸಿದ್ದಾರೆ.
ಹುಲಿಗೆಮ್ಮ ದೇವಿ ದೇವಸ್ಥಾನ, ನದಿ ದಡ, ರೈಲು ನಿಲ್ದಾಣ ಸೇರಿ ಸುತ್ತಲೂ 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸಿ.ಆರ್.ಪಿ.ಸಿ 1973 ರ ಕಲಂ 144 ರನ್ವಯ ಜು. 22 ರ ಸಾಯಂಕಾಲ 6 ಗಂಟೆಯಿಂದ ಜು. 24 ರ ಮಧ್ಯರಾತ್ರಿ 12 ಗಂಟೆಯವರೆಗೆ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಆದೇಶದನ್ವಯ ದೇವಸ್ಥಾನ ಆಡಳಿತ ಮಂಡಳಿಯವರು ದೇವಸ್ಥಾನದಲ್ಲಿ ನಡೆಯುವ ದಿನನಿತ್ಯದ ಧಾರ್ಮಿಕ ವಿಧಿ-ವಿಧಾನಗಳನ್ನು ಎಲ್ಲ ಮುಂಜಾಗ್ರತಾ ಕ್ರಮವಹಿಸಿ ನಡೆಸಲು ವಿನಾಯಿತಿ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.