ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಬೆಳಗಾವಿ : ಬಡ ರೈತರ ಅನಕ್ಷರತೆಯ ಲಾಭ ಪಡೆದು ಜಮೀನಿನಲ್ಲಿ ವಂಚನೆ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ನೊಂದ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ನೋಂದ ರೈತ ಕುಟುಂಬದವರು ಗುರುವಾರ ಮನವಿ ಸಲ್ಲಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿ, ಬಳಿಕ ಮನವಿಯದನ್ನು ಸಲ್ಲಿಸಿ, ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೀರ್ಥಕುಂಡೆ ಗ್ರಾಮದ ರೈತರಾದ ನಾವು ಮತ್ತು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾವು, ತೀರ್ಥಕುಂಡೆ ಗ್ರಾಮದ ಸರ್ವೆ ನಂಬರ್ 194ರ ವಾರಸುದಾರರಾದ ತಾತೋಬಾವಿಠಲ್ ಖಾಮಕ ಮತ್ತು ತುಕಾರಾಮ್ ವಿಠಲ್ ಖಾಮಕರ್ ಎಂಬ ರೈತರು ತಮ್ಮ ಮೂರು ಎಕರೆ ಜಮೀನನ್ನು ರಾಘವೇಂದ್ರ ರಮೇಶ್ ನಾಯ್ಕ ಎಂಬುವರಿಗೆ ಕೇವಲ 2 ವರ್ಷಗಳ ಅವಧಿಗೆ ಮಾತ್ರ ಕರಾರು ಮಾಡಿಕೊಡಲಾಗಿತ್ತು. ಇದಕ್ಕೆ ಪ್ರತಿಫಲವಾಗಿ 15 ಲಕ್ಷ ರೂಪಾಯಿಗಳಒಪ್ಪಂದವಾಗಿತ್ತು.
ಆದರೆ, ರಾಘವೇಂದ್ರ ರಮೇಶ್ ನಾಯ್ ಎಂಬುವರು ರೈತರ ಮುಗ್ಧತೆ ಮತ್ತು ಅನಕ್ಷರತೆಯ ಲಾಭ ಪಡೆದು, ದಾಖಲೆಗಳಲ್ಲಿ ಮೋಸದಿಂದ 2 ವರ್ಷಗಳ ಬದಲು 20 ವರ್ಷಗಳ ಕಾಲ ಎಂದುನಮೂದಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಒಪ್ಪಂದಕ್ಕಿಂತ ಹೆಚ್ಚಿನ ಜಮೀನನ್ನು ಅಕ್ರಮವಾಗಿ ಕಬಳಿಸಿ ರೈತರಿಗೆ ತಿಳಿಯದಂತೆ ವಂಚನೆ ಎಸಗಿರುತ್ತಾರೆ.
ಈ ಅನ್ಯಾಯದ ಕುರಿತು ನಾವು ಈಗಾಗಲೇ ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದರೂ ಸಹ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ಹಳ್ಳ ಹಿಡಿಸುತ್ತಿದ್ದಾರೆ ಹಾಗೂ ಪೊಲೀಸರು ಪ್ರಭಾವಕ್ಕೆ ಒಳಗಾಗಿ ನೊಂದ ರೈತರಿಗೆ ನ್ಯಾಯ ನೀಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ನಮಗೆ ಸ್ಥಳೀಯ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ.
ಈ ಗಂಭೀರ ವಂಚನೆ ಪ್ರಕರಣವನ್ನು ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು.ಮೋಸದಿಂದ ಸೃಷ್ಟಿಸಲಾದ ದಾಖಲೆಗಳನ್ನು ರದ್ದುಪಡಿಸಿ, ರೈತರಿಗೆ ಅವರ ಭೂಮಿಯ ಹಕ್ಕನ್ನು ಮರಳಿಸಬೇಕು. ರೈತರ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿ ಕೊಂಡಿರುವ ರಾಘವೇಂದ್ರ ರಮೇಶ್ ನಾಯ್ಕ ವಿರುದ್ಧ ಮತ್ತು ಅವರಿಗೆ ಸಹಕರಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಂಚನೆಗೋಳಗಾದ ರೈತ ಕುಟುಂಬ ಹಾಗೂ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.