ವೆಟರನ್ಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸುದರ್ಶನ್ ತಾಂಡೇಲ್ಗೆ ನಾಲ್ಕು ಚಿನ್ನದ ಪದಕ
ಕಾರವಾರ 09 : ಸೈನಿಕನಾಗಿ ಸೇವೆ ಸಲ್ಲಿಸಿ ,ಪ್ರಸ್ತುತ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆಗಿ ಕರ್ತವ್ಯದಲ್ಲಿರುವ ಸುದರ್ಶನ ಪಿ. ತಾಂಡೇಲ ಈಜು ಕ್ರೀಡೆಯಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ವೆಟರನ್ಸ್ ಕ್ರೀಡಾಕೂಟದಲ್ಲಿ ನಾಲ್ಕು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಕೊಯಮತ್ತೂರಿನ ಎಲಿವೇಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅಕ್ಟೋಬರ್ 7. ರಂದು ನಡೆದ ‘5ನೇ ವೆಟರನ್ಸ್ ಸ್ಪೋರ್ಟ್ಸ ಆ್ಯಂಡ್ ಗೇಮ್ಸ್ ನ್ಯಾಷನಲ್ ಸುದರ್ಶನ ತಾಂಡೇಲ ಅವರು 50 ಮೀಟರ್ ಫ್ರೀಸ್ಟೈಲ್, 100 ಮೀಟರ್ ಫ್ರೀಸ್ಟೈಲ್, 50 ಮೀಟರ್ ಬ್ಯಾಕ್‌ಸ್ಟ್ರೋಕ್ ಹಾಗೂ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮೂಲತಃ ಸದಾಶಿವಗಡದ ಚಿತ್ತಾಕುಲಾದವರು. ಸದ್ಯ ಕಾರವಾರ ನಿವಾಸಿಯಾಗಿರುವ ಸುದರ್ಶನ ತಾಂಡೇಲ ಅವರು ಗಡಿ ಭದ್ರತಾ ಪಡೆಯ ಮಾಜಿ ಯೋಧ. ಪ್ರಸ್ತುತ ಕಾರವಾರ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶಸೇವೆಯ ಜೊತೆಗೆ ಈಜು ಕ್ರೀಡೆಯಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಅವರು, ಶಿಸ್ತು, ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ. ಸುದರ್ಶನ ತಾಂಡೆಲ ಈಜು ಪ್ರತಿಭೆ ಈಜುಕೊಳಕ್ಕೆ ಮಾತ್ರ ಸೀಮಿತವಾಗಿಲ್ಲ. ಕಡಲ ಅಲೆಗಳ ನಡುವೆಯೂ ಈಜುವ ಪರಿಣತಿ ಹೊಂದಿರುವ ಅವರು,
ಕದಂಬ ನೌಕಾನೆಲೆಯ ವ್ಯಾಪ್ತಿಯ ಗೋವಾ ಬಾಗಾ ಕಡಲತೀರದಲ್ಲಿ ನೌಕಾದಿನಾಚರಣೆ ಹಾಗೂ ವಿಜಯ ದಿವಸದ ಅಂಗವಾಗಿ ಆಯೋಜಿಸಲಾಗುತ್ತಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ಮುಕ್ತ ಸಮುದ್ರ ಈಜು ಸ್ಪರ್ಧೆಯಲ್ಲಿ ಸತತ ಆರು ಬಾರಿ ಪ್ರಥಮ ಸ್ಥಾನ ಗಳಿಸಿದ ದಾಖಲೆ ಹೊಂದಿದ್ದಾರೆ. ಸೇನಾ ಸೇವೆಯಿಂದ ನಿವೃತ್ತರಾದ ಬಳಿಕವೂ ಕರಾವಳಿ ಕಾವಲು ಪಡೆಯ ಮೂಲಕ ದೇಶಸೇವೆಯಲ್ಲಿ ತೊಡಗಿಸಿಕೊಂಡಿರುವ ಸುದರ್ಶನ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಪಯಣ ಮುಂದುವರಿಸಿದ್ದಾರೆ.