ಮೃತ ಪತ್ರಕರ್ತ ನಾಗಶೆಟ್ಟಿ ಧರ್ಮಪೂರೆರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಮೃತ ಪತ್ರಕರ್ತ ನಾಗಶೆಟ್ಟಿ ಧರ್ಮಪೂರೆರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
Former Minister Bandeppa Khashempur visited the house of deceased journalist Nagashetty Dharmapure a

 ಬೀದರ್  21: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ನಾಗಶೆಟ್ಟಿ ಧರ್ಮಪೂರೆ (ಧರಂಪುರ) ರವರ ಮನೆಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. 

ಬೀದರ್ ನಗರದ ಚಿದ್ರಿಯ ಬುತ್ತಿ ಬಸವಣ್ಣ ದೇವಸ್ಥಾನದ ಹತ್ತಿರವಿರುವ ನಾಗಶೆಟ್ಟಿ ಧರ್ಮಪೂರೆರವರ ಮನೆಗೆ ಮಂಗಳವಾರ ಸಂಜೆ ಭೇಟಿ ನೀಡಿ, ಸಾಂತ್ವನ ಹೇಳಿ ಮಾತನಾಡಿದ ಅವರು, ನಾಗಶೆಟ್ಟಿ ಧರ್ಮಪೂರೆರವರು ತುಂಬಾ ಸರಳ ವ್ಯಕ್ತಿತ್ವದವರಾಗಿದ್ದರು ಎಂದರು. 

ಧರ್ಮಪೂರೆರವರು ಸಾಕಷ್ಟು ಬಾರಿ ನಮ್ಮ ಮನೆಗೆ ಬಂದು ನನ್ನ ಸಂದರ್ಶನ ಮಾಡಿದ್ದರು. ಜೋರು ಧ್ವನಿಯಲ್ಲಿ ಮಾತನಾಡುವುದು, ಪ್ರಶ್ನೆ ಕೇಳುವುದು, ಪ್ರತಿಯೊಂದರ ಬಗ್ಗೆಯೂ ತಿಳಿದುಕೊಂಡು ಮಾತನಾಡುವುದನ್ನು ಅವರು ಮೈಗೂಡಿಸಿಕೊಂಡಿದ್ದರು. ಬಡವರ, ಜನರ ಪರ ಧ್ವನಿ ಎತ್ತುವ ಮೂಲಕ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಅವರು ಮಾಡುತ್ತಿದ್ದರು. 

ಅತ್ಯಂತ ಕ್ರಿಯಾಶೀಲರಾಗಿ, ಸದಾಕಾಲವೂ ಉತ್ಸಾಹ, ಲವಲವಿಕೆಯಿಂದ ಇರುತ್ತಿದ್ದ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ನೋವಿನ ಸಂಗತಿಯಾಗಿದೆ. ನಾಗಶೆಟ್ಟಿ ಧರ್ಮಪೂರೆರವರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು, ಅವರ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.  

ಈ ಸಂದರ್ಭದಲ್ಲಿ ಪತ್ರಕರ್ತರಾದ ವಿಜಯಕುಮಾರ್ ಸೋನಾರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಬಿರಾದಾರ ಚಿದ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷರಾದ ದೇವಪ್ಪ ಚಾಂಬಾಳೆ, ಪ್ರಮುಖರಾದ ಸಂಗು ಚಿದ್ರಿ, ತುಕ್ಕರಾಂ ಸೇರಿದಂತೆ ಮೃತ ಪತ್ರಕರ್ತರ ಸಂಬಂಧಿಕರು, ಪತ್ರಕರ್ತರು, ಸರ್ಕಾರಿ ನೌಕರರು ಇದ್ದರು. 


ಸುದ್ದಿ ಓದಿ