ಆರ್ಥಿಕ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಫಿನ್ಟೆಕ್ ಪ್ರಮುಖ ಪಾತ್ರ
ಲೋಕದರ್ಶನ ವರದಿ
ಬೆಳಗಾವಿ 9: ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಗ್ರಾಮೀಣ ಹಾಗೂ ಆರ್ಥಿಕ ಸೇವೆಗಳಿಂದ ವಂಚಿತ ಸಮುದಾಯಗಳಿಗೆ ಹಣಕಾಸು ಸೇವೆಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪರಾಗ್ ಅಫ್ಜಲ್ಪುರಕರ್ ಹೇಳಿದರು.
ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ (ಸ್ವಾಯತ್ತ) ವಾಣಿಜ್ಯ ವಿಭಾಗವು ಐಕ್ಯೂಎಸಿ ಉಪಕ್ರಮದಡಿ ಶುಕ್ರವಾರ ಆಯೋಜಿಸಿದ್ದ ‘ಆರ್ಥಿಕ ಸೇರೆ್ಡಯಲ್ಲಿ ಫಿನ್ಟೆಕ್ನ ಪಾತ್ರ’ ಎಂಬ ರಾಜ್ಯಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ಮೆಲಿನಮನಿ ಮಾತನಾಡಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಪ್ರಾಯೋಗಿಕ ಸಂಶೋಧನೆಗೆ ಲಿಂಗರಾಜ ಕಾಲೇಜು ಆದ್ಯತೆ ನೀಡುತ್ತಿದೆ.
ಪ್ರಸ್ತುತ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ವಿಷಯವನ್ನು ಆಯ್ಕೆ ಮಾಡಿಕೊಂಡ ವಾಣಿಜ್ಯ ವಿಭಾಗದ ಕಾರ್ಯವನ್ನು ಶ್ಲಾಘಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ಸುಮಾರು 80 ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಯುಪಿಐ ಬಳಕೆ, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳು, ಕಿರು ಹಣಕಾಸು ತಂತ್ರಜ್ಞಾನಗಳು ಹಾಗೂ ಸರ್ಕಾರದ ವಿವಿಧ ಉಪಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಉತ್ತಮ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ಒಟ್ಟು 10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಯೋಜಕಿ ವಿಭಾ ಹೆಗಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಾಪಕ ಸಂಯೋಜಕರಾದ ಲಕ್ಷ್ಮೀ ಶಿವಣ್ಣವರ, ವಿನಾಯಕ ಸೇರಿದಂತೆ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಸಂಯೋಜಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.