‘ರೈತರ ನಿತ್ಯ ಪರಿಶ್ರಮಕ್ಕೆ ಪ್ರತಿಫಲ ಸಿಗಲಿ’
ಮಹಾಲಿಂಗಪುರ: ಅನ್ನ ಬೆಳೆಯುವ ರೈತ ಲೋಕಕ್ಕೆ ದಾರಿ ದೀಪದಂತೆ. ಇಂದಿಗೂ ದೇಶದ ಬೆನ್ನುಲುಬಾಗಿ ನಿಂತಿರುವ ನಮ್ಮ ರೈತರ ನಿತ್ಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಕಮಲಸಿಂಗ್ ಕಿಚ್ಚಿ ಹೇಳಿದರು.
ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ದಿ.ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ 5ನೇ ಪ್ರಧಾನ ಮಂತ್ರಿಯಾಗಿದ್ದವರು. ಅವರ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ತಂದ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದಿದ್ದಕ್ಕಾಗಿ ಅವರ ನೆನಪಿನಲ್ಲಿ ಡಿ.23ರ ದಿನವನ್ನು ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಚಿನ್ನ, ಪೈಪ್ ಲೈನ್, ಕೃಷಿ ಮತ್ತು ಹೈನುಗಾರಿಕೆಗಾಗಿ, ಆಕಳು, ಎಮ್ಮೆ, ಆಡು, ಕುರಿ, ಮೊಲ, ಹಂದಿ ಇನ್ನು ಮುಂತಾದ ಸಾಕಾಣಿಕೆಗಳಿಗೆ ಮತ್ತು ಮಹಿಳಾ ಸಂಘಗಳು ಮತ್ತು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ನಿಂದ ಕಡಿಮೆ ಬಡ್ಡಿಯಲ್ಲಿ ಸರಳ ಸಾಲದ ವ್ಯವಸ್ಥೆ ಇದೆ ಎಂದರು.
ಚೌಧರಿ ಚರಣ್ಸಿಂಗ್ ಅವರ ಜನ್ಮದಿನದ ಹಿನ್ನೆಲೆ ರೈತರಿಂದ ಕೇಕ್ ಕತ್ತರಿಸಲಾಯಿತು. ನಂತರ ರೈತರಿಗೆ ಹಸಿರು ಶಾಲು ಹೊದಿಸಿ ಗೌರವಿಸಲಾಯಿತು. ಕೃಷಿ ಸಹಾಯಕ ಆನಂದ ಚಿಟಗುಪ್ಪಿ, ಸಹಾಯಕರಾದ ಪ್ರಕಾಶ ನಂದಗಾಂವಕರ, ಶಿವಯ್ಯ ಮಠದ, ಗ್ರಾಹಕ ಸೇವಾ ಕೇಂದ್ರದ ಪೂರ್ಣಾನಂದ ಹುಲ್ಲೂರ, ಗೋಪಾಲ ಅಡವಿ, ಭೀಮಶಿ ದಳವಾಯಿ, ಕಲಾವತಿ ಯಾದವಾಡ, ಸಿದ್ದಗೌಡ ಪಾಟೀಲ, ಧರೇಪ್ಪ ಸತ್ತಿಗೇರಿ ಇತರರು ಇದ್ದರು.