ರೈತರ ಕಡಲೆ ಬಣವಿಗೆ ಬೆಂಕಿ: ಅಪಾರ ಪ್ರಮಾಣದ ಕಡಲೆ ಮೇವು ಬೆಂಕಿಗೆ ಆಹುತಿ
ಶಿರಹಟ್ಟಿ 23: ತಾಲೂಕಿನ ಮಾಗಡಿ ಗ್ರಾಮದಲ್ಲಿ 22/02/2024ರ ರಾತ್ರಿ 7:30ರ ಸುಮಾರಿಗೆ ರೈತರು ಬೆಳೆದ ಕಡಲೆ ಬೆಳೆಯ ಮೇವಿನ ಬಣವೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.
ಮಾಗಡಿ ಗ್ರಾಮದ ರೈತ ತಿಪ್ಪಣ್ಣ ಬಸಪ್ಪ ಗೋಡಿ ಇವರ ಹೊಲದ ಸರ್ವೆ ನಂಬರ್ 176/7 ರಲ್ಲಿ ಬೆಳೆದ ಸುಮಾರು 2 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಕಡಲೆ ಬೆಳೆ ಬಣಿವೆಯನ್ನು ಮಾಗಡಿ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿಯೇ ಶೇಖರಿಸಲಾಗಿತ್ತು. ಯಾರೋ ದುಷ್ಕರ್ಮಿಗಳು ಸಾಯಂಕಾಲ 7:00ರ ಸುಮಾರಿಗೆ ಈ ಕಡಲೆ ಬೆಳೆ ಬಣವಿಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸ್ಥಳೀಯರ ಅನುಮಾನವಾಗಿದೆ.
ಈ ಬಣವಿಗೆ ಬೆಂಕಿ ಹತ್ತಿದ್ದನ್ನು ನೋಡಿದ ಸ್ಥಳೀಯರು ಬೆಂಕಿ ನಂದಿಸಲು ಗ್ರಾಮದ ವಲಯದಲ್ಲಿರುವ ಜಮೀನಿಗೆ ಬರುವಷ್ಟರಲ್ಲಿ ಸುಮಾರು ಎರಡು ಎಕರೆ ಕಡಲೆ ಬಣವಿ ಭಾಗಶಃ ಸುಟ್ಟು ಹೋಗಿತ್ತು, ಇದರಿಂದ ರೈತ ತಿಪ್ಪಣ್ಣ ಬಸಪ್ಪ ಗೋಡಿ ದಿಗ್ಬ್ರಾಂತನಾಗಿದ್ದಾನೆ.