ಬೆಳಗಾವಿಯಲ್ಲಿ 31ರಂದು ರೈತ ಮಹಾ ಪಂಚಾಯತ್: ಪೂರ್ವಭಾವಿ ಸಭೆ
ಮಹಾಲಿಂಗಪುರ 27: ಸುಮಾರು 70ವರ್ಷಗಳಿಂದ ಈ ಹಿಂದೆ ದೇಶವನ್ನಾಳಿದ ವಿವಿಧ ಪಕ್ಷಗಳು, ದೇಶದ ಸಮಸ್ಯೆಗಳನ್ನು ಮನಗಂಡು ಪರಿಹಾರಕ್ಕಾಗಿ ಹೊಸ ಹೊಸ ಯೋಜನೆಗಳನ್ನು ತಂದರೆ ವಿನಹ ಜನಸಾಮಾನ್ಯ ಹಾಗೂ ರೈತರಿಗೆ ಮಾರಕವಾಗುವ ಪ್ರಧಾನಿ ಮೋದಿ ತಂದಿರುವ ಕಾಯ್ದೆಗಳನ್ನು ತರಲಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಗಂಗಾಧರ ಮೇಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ವಿಭಾಗಮಟ್ಟದ ಬಹಿರಂಗ ರೈತ ಮಹಾಸಭಾ ಮಾರ್ಚ್ 31ರಂದು ಜರುಗಲಿರುವ ಪೂರ್ವಭಾವಿ ಚಿಂತನ ಸಭೆಯ ಪ್ರಯುಕ್ತ ಶನಿವಾರ ಮಧ್ಯಾಹ್ನ ಜಿಎಲ್ ಬಿಸಿ ವಸತಿ ಗೃಹದಲ್ಲಿ ರೈತ ಸಂಘ ಹಸಿರು ಸೇನೆ ಹಾಗೂ ಮಹಿಳಾ ಸಂಘಟನೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭೂಸುಧಾರಣೆ, ಅಗತ್ಯ ವಸ್ತುಗಳ, ಎಪಿಎಂಸಿ, ಕೃಷಿ ಗುತ್ತಿಗೆ, ವಿದ್ಯುತ್ ಹಾಗೂ ಇನ್ನೂ ಅನೇಕ ಮಾರಕ ಕಾಯ್ದೆಗಳನ್ನು ತಂದಿರುವುದಕ್ಕೆ ವಿರೋಧಿಸಿ ಕಳೆದ ಅಗಸ್ಟ್ ನಿಂದ ರಾಜಧಾನಿಯಲ್ಲಿ ಪಂಜಾಬ್ ರೈತರು ನಿರಂತರ ಮುಷ್ಕರ ನಡೆಸುತ್ತಿದ್ದಾರೆ. ದೇಶದ ಬೆನ್ನೆಲುಬಾದ ಈ ರೈತನ ಮುಷ್ಕಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾದರೂ ಕೇಂದ್ರಸರ್ಕಾರ ಇಲ್ಲಿಯವರೆಗೂ ತನ್ನ ಸರ್ವಾಧಿಕಾರ ಧೋರಣೆಯನ್ನು ಬಿಡದೇ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇನ್ನೂ ಅನೇಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲಿಸಿ, ಬೆಳಗಾವಿಯಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯದುವೀರ ಸಿಂಘ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ನೇತೃತ್ವದಲ್ಲಿ, ಕರಾಳ ಕಾನೂನುಗಳನ್ನು ಹಿಂಪಡೆಯಿರಿ ಹಾಗೂ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಿ ಎಂಬ ರೈತ ಮಹಾ ಪಂಚಾಯತ್ ಬೃಹತ್ ಸಭೆಯಲ್ಲಿ ಪಾಲ್ಗೊಳ್ಳಲು ತಾಲೂಕ ಅಧ್ಯಕ್ಷ ಶ್ರೀಕಾಂತ್ ಗೂಳನ್ನವರ ಈ ಭಾಗದ ರೈತರಲ್ಲಿ ಮನವಿ ಮಾಡಿ ಮಾತನಾಡಿದರು.
ಕಾರ್ಯದರ್ಶಿ ಬಂದೇನವಾಜ್ ಪಕಾಲಿ, ಉಪಾಧ್ಯಕ್ಷ ಹೊನ್ನಪ್ಪ ಬಿರಡಿ, ರೈತ ಪದಾಧಿಕಾರಿಗಳಾದ ಲಕ್ಷ್ಮಣ್ ಬ್ಯಾಳಿ, ಯಲ್ಲಪ್ಪ ಮೂಸಿ, ಶಿವಪ್ಪ ಹೋಟ್ಕರ್, ಹಾಲಪ್ಪ ನಸಲಾಪುರ, ಮಹಾಂತೇಶ್ ಹೆಗ್ಗಾಣಿ, ಶ್ರೀಶೈಲ ರಂಗಾಪುರ, ಮಹಿಳಾ ಘಟಕದ ಆರ್.ಕೆ ಅಂಬಿಕಾ ಇನ್ನು ಮುಂತಾದವರಿದ್ದರು.