ಕುಟುಂಬ ರಾಜಕಾರಣ - ಯಡಿಯೂರಪ್ಪ ನಿರ್ಗಮನದ ದಾರಿ..!!?

ಕುಟುಂಬ ರಾಜಕಾರಣ -  ಯಡಿಯೂರಪ್ಪ ನಿರ್ಗಮನದ ದಾರಿ..!!?

(ಕೆ.ಎಸ್. ರಾಜಮನ್ನಾರ್)  
ಬೆಂಗಳೂರು,  ಜುಲೈ 20  ಬಿಜೆಪಿ ಹೈಕಮಾಂಡ್ ವಿಶ್ವಾಸ, ಆರ್ ಎಸ್ ಎಸ್  ಕೃಪಕಟಾಕ್ಷ  ಕಳೆದುಕೊಂಡು ಬಹಳ ದಿನಗಳಿಂದಲೂ  ಏಕಾಂಗಿಯಾಗಿದ್ದ    ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಇನ್ನು ಕೆಲವೇ ದಿನಗಳಲ್ಲಿ , ಅದೂ ಹೆಚ್ಚುಕಡಿಮೆ ತಿಂಗಳಾಂತ್ಯಕ್ಕೆ ಅಧಿಕಾರದಿಂದ ನಿರ್ಗಮಿಸುವುದು  ಬಹುತೇಕ ನಿಶ್ಚಿತವಾಗಿದೆ.  
ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ವಾಗಿದ್ದರೆ. ಅವರಿಂದಲೇ ಮತ್ತೆ ಅಧಿಕಾರ ಸಿಗುವುದು ಗೊತ್ತಿದ್ದರೆ,  ರಾಜಿನಾಮೆ ಕೊಟ್ಟು ಹೋಗಿ ಎಂದು ಏಕೆ  ಹೇಳುತ್ತಿದ್ದರು ಎಂಬ ಪ್ರಶ್ನೆ ಬಹಳ ಮುಖ್ಯವಾಗಿದೆ. ಯಡಿಯೂರಪ್ಪ ಅವರಿಂದ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬರಲು  ಕಾರಣವಾಗಿತ್ತು ಎಂಬುದನ್ನು ಕೆಲ ಮಟ್ಟಿಗೆ ಒಪ್ಪಿ ಕೊಂಡರೂ , ಅದೇ ಯಡಿಯೂರಪ್ಪ ಇಂದು ಹೈಕಮಾಂಡ್ ವಿಶ್ವಾಸ ಕಳೆದುಕೊಂಡು ದಯನೀಯವಾಗಿ ಅಧಿಕಾರದಿಂದ ನಿರ್ಗಮಿಸುವ ದಾರುಣ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸ.
ಒಂದು ರೀತಿಯಲ್ಲಿ ಇದು ಅವರೇ ಮಾಡಿಕೊಂಡ ಸ್ವಯಂಕೃತ ಅಪರಾಧ ಎಂದು ಹೇಳಬಹುದು, ಒಂದು ಬಾರಿ ಜೈಲಿಗೆ ಹೋಗಿ ಬಂದನಂತರ ಅವರು ಆಡಿದ ಮಾತಿನಂತೆ ನಡೆದುಕೊಂಡಿದ್ದರೆ ಇಂದು ಅಧಿಕಾರದಿಂದ ನಿರ್ಗಮಿಸುವಂತಹ ಶೋಚನೀಯ ,ದಯನೀಯ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ  ಸದ್ಯದ ಪರಿಸ್ಥಿತಿಗೆ ಅವರು ಬೇರೆಯವರನ್ನು  ಬೊಟ್ಟು ಮಾಡಿ ದೂಷಣೆ  ಮಾಡುವುದರಲ್ಲಿ ಯಾವುದೇ ಪುರುಷಾರ್ಥವಿಲ್ಲ. ಅರ್ಥವಿಲ್ಲ .
ನಿಜ.  ಬಿಜೆಪಿಗೆ ಯಡಿಯೂರಪ್ಪ ಒಂದು ಕಾಲದಲ್ಲಿ ಅನಿವಾರ್ಯವಾಗಿದ್ದರು  ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು, ನಂತರ ಅವರಿಗೆ ಪಕ್ಷದ ಅಧ್ಯಕ್ಷರ ಪಟ್ಟ, ಮುಂದೆ ಮುಖ್ಯಮಂತ್ರಿಯ ಪಟ್ಟ ಕಟ್ಟಲಾಯಿತು , ಬದಲಾದ ಕಾಲಘಟ್ಟದಲ್ಲಿ ಈಗ ಅದೇ ಹೈಕಮಾಂಡ್ ಅಧಿಕಾರ ಬಿಟ್ಟು ಹೊರ ನಡೆಯಿರಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯವಲ್ಲ ಎಂಬ ಸಂದೇಶವನ್ನು ಹೊರಹಾಕಿದೆ. ಮಗನ ಭವಿಷ್ಯದ ಸಲುವಾಗಿಯೇ  ಯಡಿಯೂರಪ್ಪ ಒಲ್ಲದ ಮನಸ್ಸಿನಿಂದಲೇ, ಅನಿವಾರ್ಯವಾಗಿ  ರಾಜೀನಾಮೆ ಕೊಡುವ ಹಂತ ತಲುಪಿದ್ದಾರೆ.   ವಿದಾಯದ ಭಾಷಣದ ಮಾತು,  ನಡವಳಿಕೆಯ ಮೂಲಕ ಅಧಿಕಾರ  ಬಿಟ್ಟು ಹೋಗುವುದನ್ನು  ಅವರು ಖಚಿತಪಡಿಸಿದ್ದಾರೆ.  
 
ಕೆಲವು ಎಲ್ಲವೂ ಅಂದುಕೊಂಡತೆ ಸಾಗಿದರೆ  26 ಕ್ಕೆ  ಎರಡು ವರ್ಷಗಳ ಆಡಳಿತ ಪೂರ್ಣ ಗೊಳಿಸಿದ   ನಂತರ ಅವರ ರಾಜೀನಾಮೆ ಖಚಿತ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಕೆಲವು ಅಭಿವೃದ್ಧಿ ಯೋಜನೆಗಳಿಗೆ ಯೋಜನೆಗಳನ್ನು ತಾವೇ ಉದ್ಘಾಟನೆ ಮಾಡಬೇಕು. ಮತ್ತು ವಿಧಾನಮಂಡಲದ ಕೊನೆಯ ಅಧಿವೇಶನದಲ್ಲಿ  ಕೊನೆಯ ಭಾರಿ  ಮುಖ್ಯಮಂತ್ರಿಯಾಗಿ, ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಮಾಣಿಕ್ ಷಾ ಪರೇಡ್ ನಲ್ಲಿ ಕೊನೆಯ ದ್ವಜಾರೋಹಣ ಮಾಡಬೇಕೆಂಬ  ಕನಸು  ಈಡೇರುವ ಸಾಧ್ಯತೆ  ಬಹಳ ಕಡಿಮೆ ಎನ್ನಲಾಗಿದೆ.

ಇದೇ 22ರಂದು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯೇ  ಅವರ ಪಾಲಿಗೆ ಕೊನೆ ಸಂಪುಟ ಸಭೆಯಾಗಬಹುದು . ಕಾರಣವಿಷ್ಟೆ  23 ರಂದು  ರಾಜ್ಯಪಾಲರ ಭೇಟಿಗೆ  ಅನುಮತಿ ಕೇಳುವ ಮೂಲಕ ನಿರ್ಗಮನಕ್ಕೆ ವೇದಿಕೆ ಸಜ್ಜು ಮಾಡಿಕೊಂಡಿರುವುದು  ಮತ್ತಷ್ಟು  ಪುಷ್ಠಿಗೆ ಕಾರಣವಾಗಲಿದೆ. .   
ಸರಿ ಮುಂದೇನು? ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರವೇ ಮುಂದಿನ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಬಿಜೆಪಿಯ  ವರಿಷ್ಠರು ತೀರ್ಮಾನಕ್ಕೆ  ಬಂದಿದ್ದಾರೆ ಎಂದೂ  ಹೇಳಲಾಗುತ್ತಿದೆ  ರಾಜೀನಾಮೆ ನಂತರವೇ   ಮತ್ತೊಬ್ಬ ಲಿಂಗಾಯಿತ ಮುಖಂಡರಿಗೆ ಪಟ್ಟುಕಟ್ಟುವ  ಸಾಧ್ಯತೆ ಹೆಚ್ಚಾಗಿದೆ.   ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಬಸವರಾಜ  ಬೊಮ್ಮಾಯಿ, ಜಗದೀಶ್ ಶೆಟ್ಟರ್ ತೀರಾ ಅನಿವಾರ್ಯವಾದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಒಕ್ಕಲಿಗರ ಪೈಕಿ,   ಡಿ. ವಿ ಸದಾನಂದ ಗೌಡ, ಸಿ. ಎನ್ ಅಶ್ವತ್ಥ ನಾರಾಯಣ, ದಲಿತ ಸಮುದಾಯದ ಪೈಕಿ ಗೋವಿಂದ ಕಾರಜೋಳ, ಎ.   ನಾರಾಯಣಸ್ವಾಮಿ ಮುಂತಾದವರು ಹೆಸರುಗಳು ವರಿಷ್ಠರ ಆಲೋಚನೆಯಲ್ಲಿ ಸುಳಿದಾಡುತ್ತಿದೆ.  ಹೆಚ್ಚಿನ ಪಾಲು ಲಿಂಗಾಯಿತರಿಗೆ  ಪಟ್ಟ ದೊರಕುವುದು  ಖಚಿತ ಎನ್ನಲಾಗಿದೆ.
ಆದರೆ ಅಂತಿಮವಾಗಿ, ವರಿಷ್ಠರ ಅದರಲ್ಲೂ ವಿಶೇಷವಾಗಿ ಆರೆಸ್ಸೆಸ್ ಕೃಪಾಕಟಾಕ್ಷ ಯಾರಿಗೆ ಒಲಿಯಲಿದೆ ಎಂಬುದರ ಮೇಲೆ ಮುಂದಿನ ಮುಖ್ಯಮಂತ್ರಿ ಯಾರೆಂಬುದು ತೀರ್ಮಾನವಾಗಲಿದೆ.
ಜಾತಿಯತೆ, ಭ್ರಷ್ಟಾಚಾರದ ಕಮಟು ವಾಸನೆ,  ಹಿಡಿತ  ಲಗಾಮಿಲ್ಲದ  ಆಡಳಿತದ ಕಾರಣದಿಂದ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ನಾವೇ ಕೈಯಾರ ತಟ್ಟೆಯಲ್ಲಿ ಇಟ್ಟು ಅಧಿಕಾರವನ್ನು ಧಾರೆ ಎರೆದುಕೊಡುವಂತಹ  ಮತ್ತೆ ಪರಿಸ್ಥಿತಿ ಬರಲಿದೆ  ಎಂಬುದನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್ ಮಗನಿಗೆ ಉಜ್ವಲ ಭವಿಷ್ಯ ತೋರುವ   ಮೂಲಕ ಯಡಿಯೂರಪ್ಪ ಅವರನ್ನು ಕಟ್ಟಿಹಾಕಿ  ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮನದ ದಾರಿ ತೋರಿಸಿದೆ.
ಇನ್ನು ಯಡಿಯೂರಪ್ಪನವರ ರಾಜಕೀಯ ಶಕ್ತಿ ಬಗ್ಗೆ ಹೇಳುವುದಾದರೆ ಅವರು ಬಿಜೆಪಿಯಲ್ಲಿದ್ದರೂ  ಸ್ವತಂತ್ರವಾಗಿ ಸರಕಾರ ರಚನೆಗೆ ಬೇಕಾಗುವಷ್ಟು ಸಂಖ್ಯಾ ಬಲದಿಂದ ವನ್ನು ಅಧಿಕಾರಕ್ಕೆ ತರಲಾಗಲಿಲ್ಲ. ಅದೇ ರೀತಿ ಪಕ್ಷಕ್ಕೆ ಸಡ್ಡು ಹೊಡೆದು, ಹೊರ ಹೋಗಿ  ಪ್ರಾದೇಶಿಕ ಪಕ್ಷ ಕಟ್ಟಿ ಮೀಸೆ ತಿರುವಿದರೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು, ತರಲು  ಸಾಧ್ಯವಾಗಲಿಲ್ಲ. ಹೀಗಾಗಿ ಚುನಾವಣಾ ಅಖಾಡದಲ್ಲಿ ಯಡಿಯೂರಪ್ಪ ಶಕ್ತಿ ಏನೆಂಬುದನ್ನು ಬಿಜೆಪಿಯ ನಾಯಕರಿಗೆ, ರಾಜ್ಯದ  ನಾಯಕರಿಗೆ , ಜನತೆಗೆ  ಮನವರಿಕೆಯಾಗಿದೆ.
ಒಬ್ಬ ಮಗನಿಂದ ಅಧಿಕಾರ ಕಳೆದುಕೊಂಡು ಕೆಲವು  ದಿನಗಳ  ಮಟ್ಟಿಗೆ ಜೈಲು ಪಾಲಾಗಿದ್ದರೆ ಮತ್ತೊಬ್ಬ  ಮಗನಿಂದ  ಎರಡನೇ  ಭಾರಿಗೆ  ಅಧಿಕಾರ ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಅಅವರು ತಮ್ಮ ಕೈಯಾರೆ  ತಂದುಕೊಂಡಿದ್ದಾರೆ. ಕುಟುಂಬ  ರಾಜಕಾರಣ ಮತ್ತು  ಭ್ರಷ್ಟಾಚಾರದ ಗುರುತರ ಆರೋಪಗಳನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ  ಎಂಬ ಕಹಿ ಸತ್ಯವನ್ನು  ಅರ್ಥ ಮಾಡಿಕೊಂಡಿದ್ದಾರೆ ಇಂದು ಅವರಿಗೆ ದಾರುಣ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ   

ಅಧಿಕಾರದಿಂದ ಹೆಚ್ಚು  ಪ್ರಯಾಸವಿಲ್ಲದೆ ಇಳಿಸುವಂತಹ  ದಾರಿಯನ್ನು ಮಗನ ಮೂಲಕವೆ  ಪಕ್ಷದ ವರಿಷ್ಠರಿಗೆ ತೋರಿಸಿಕೊಟ್ಟು ಬೇರೆ ದಾರಿ ಕಾಣದೆ ಪೆಚ್ಚುಮೋರೆ ಹಾಕಿಕೊಂಡಿದ್ದಾರೆ.ಒಂದು ರೀತಿಯಲ್ಲಿ ಕುಟುಂಬ ರಾಜಕಾರಣವೇ ಅವರಿಗೆ ಬಗ್ಗಲ ಮುಳ್ಳಾಗಿ ಚುಚ್ಚಿದೆ. ಇದಕ್ಕಾಗಿ ಬೇರೆಯವರನ್ನು ನಿಂದಿಸಲಾಗದು.  ಕುಟುಂಬ ಪ್ರೇಮ, ಸ್ವಜಾತಿ ಪ್ರೇಮ  ತೋರದೆ  ಜನ ಮೆಚ್ಚುವ , ಖಡಕ್  ಆಡಳಿತದ ಕಡೆ ಹೆಚ್ಚು  ಗಮನ ಕೊಟ್ಟಿದ್ದರೆ ಇದೆಲ್ಲಾ ವರಾತ, ರಂಪಾಟವೇ ಅವರಿಗೆ  ಬೇಕಿರುತ್ತಿರಲಿಲ್ಲ, ಬರುತ್ತಿರಲಿಲ್ಲವೆನೋ.!!?

ಆಡಳಿತದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡದಿರುವುದು, ನಿಗಮ ಮಂಡಳಿ ನೇಮಕಾತಿಯಲ್ಲಿ ಪಕ್ಷದ ನೈಜ  ಕಾರ್ಯಕರ್ತರಿಗೆ ಅವಕಾಶ ನೀಡದೆ, ತಮಗೆ ನಿಷ್ಠರಾದವರಿಗೆ  ಅಧಿಕಾರ ನೀಡಿರುವುದು, ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತದಲ್ಲಿ ಮಗನ ಹಸ್ತಕ್ಷೇಪ  ಅದರಲ್ಲೂ  ನಿಗಮ ಮಂಡಳಿಯ ನೇಮಕಾತಿಯಲ್ಲಿ ಹೆಚ್ಚಿದ  ಪಾರಮ್ಯ , ಜೊತೆಗೆ  ಬಿಜೆಪಿಯ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿ ಜಾತಿಗೊಂದು, ಕುಲ ಕೊಂದು ಅಭಿವೃದ್ಧಿ ಮಂಡಳಿ ಮಾಡುವ ನಿರ್ಧಾರಗಳು ಯಡಿಯೂರಪ್ಪನವರ ಇಂದಿನ  ನಿರ್ಗಮನದ ಪರಿಸ್ಥಿತಿಗೆ ಕಾರಣವಾಗಿದೆ.
ಸದ್ಯ ಬಿಜೆಪಿ ಪರಿಸ್ಥಿತಿ ಹೇಗಿದೆ ಎಂದರೆ ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಾರದೆ  ಹೋದರೂ  ಚಿಂತೆ ಇಲ್ಲ, ಹೆಚ್ಚು ಎಂಪಿಗಳನ್ನು ಗೆಲ್ಲುವ  ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶವೇ ಕೇಂದ್ರದ ಬಿಜೆಪಿ ನಾಯಕರಿಗೆ ಪರಮ ಗುರಿಯಾಗಿದೆ.  ಹೀಗಾಗಿ ಯಡಿಯೂರಪ್ಪ ಅಧಿಕಾರದಲ್ಲಿ ಉಳಿಯಲು , ಜಾತಿರಾಜಕಾರಣದ  ಮಠಾಧೀಶರನ್ನು ಮುಂದೆ ಬಿಟ್ಟು ನಡೆಸಬಹುದಾದ ಹೋರಾಟ, ಒತ್ತಡ ತಂತ್ರಗಳಿಗೆ   ಮಣಿಯುವ ಸಾಧ್ಯತೆಗಳಿಲ್ಲ, ಯಡಿಯೂರಪ್ಪ ಇನ್ನು ಏನೇ ಆಟ ಚಾಲು ಮಾಡಿದರೂ ನಡೆಯುವ  ಸಾಧ್ಯತೆ  ತೀರಾ ಕ್ಷೀಣಿಸಿದೆ.

ಸುದ್ದಿ ಓದಿ