ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಆಟವಾಡಿ
ಡಿಡಿಪಿಯು ಶಶಿಧರ ಪೂಜಾರಿ ಹೇಳಿಕೆ | ಜಿಲ್ಲಾ ಮಟ್ಟದ ಪ.ಪೂ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಚಾಲನೆ
ಮಹಾಲಿಂಗಪುರ 19: ಕೊರೋನಾ ಸಂದರ್ಭವಿದ್ದರೂ ಮಕ್ಕಳು ಕ್ರೀಡಾ ಕೌಶಲ್ಯದಿಂದ ವಂಚಿತರಾಗಬಾರದೆಂಬ ಉತ್ಕಟಿಚ್ಛೆಯಿಂದ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಕ್ರೀಡೆಯನ್ನು ಗೆಲ್ಲಿಸಿ ಸ್ಪೂರ್ತಿ ಮೆರೆಯಿರಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರಿ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಕೆಎಲ್ಇ, ಎಸ್ ಸಿ ಪಿ ಪಪೂ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಾ.19 ಮತ್ತು 20ರ 2 ದಿನ ಹಮ್ಮಿಕೊಂಡಿರುವ 2020-21 ನೇ ಸಾಲಿನ ಬಾಗಲಕೋಟೆ ಜಿಲ್ಲಾ ಮಟ್ಟದ ಪಪೂ ಮಹಾವಿದ್ಯಾಲಯಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾವೆಲ್ಲರೂ ಕ್ರೀಡಾ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು ಅದಕ್ಕೆ ಚ್ಯುತಿ ಬಾರದ ಹಾಗೆ ನಿರ್ಣಾಯಕರು ಕೂಡ ಪಾರದರ್ಶಕವಾಗಿ ನಡೆದುಕೊಂಡು, ಕ್ರೀಡಾಪಟುಗಳು ನೈಜ ಪ್ರತಿಭೆ ತೋರಿಸಿ ಜಿಲ್ಲೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಲಿ ಎಂದರು.
ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಆಯ್.ಕುಂದಗೋಳ ಅವರ ಪ್ರಾಸ್ತಾವಿಕ ನುಡಿಯಲ್ಲಿ, ಮರು ಅವಕಾಶಕ್ಕಾಗಿ ಕಾಯದೇ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ , ಕ್ರೀಡೆ ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಅತ್ಯಂತ ಮಹತ್ವದ ವಿಷಯ ಆದರೆ ಅದನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಮಹಾಲಿಂಗಪ್ಪ ಕುಳ್ಳೊಳ್ಳಿ ಕ್ರೀಡಾ ಜ್ಯೋತಿ ಬೆಳಗಿಸಿ, ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಪಿ ಎಸ್ ಐ ಜಿ.ಎಸ್.ಉಪ್ಪಾರ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಬಸಪ್ಪ ಬಂತಿ, ಡಾ.ಬಿ.ಎಸ್.ಅಂಬಿ, ಜಿಲ್ಲಾ ಕ್ರೀ ಸಂ. ಜನವಾಡೆ, ಎಸ್.ಬಿ.ಮೇಟಿ, ಬಿ.ಎಮ್.ಸಿದ್ನಾಳ, ವಿ.ಎಸ್.ಅಂಗಡಿ, ಸಿ.ಎಸ್.ಕೊಣ್ಣೂರ,ವಿ.ಎಂ ಮುಧೋಳ, ಆರೋಗ್ಯ ಕಾರ್ಯಕರ್ತೆ ಶ್ರೀದೇವಿ ಅಡವಿ ಇತರರು ಇದ್ದರು.
ವಿದ್ಯಾರ್ಥಿನಿ ಕಾವ್ಯ ಮಾಳಿ ಪ್ರಾರ್ಥಿಸಿ, ಪ್ರಾಚಾರ್ಯ ಡಿ.ಬಿ.ಕೋಳಿ ಸ್ವಾಗತಿಸಿ, ಪೂರ್ಣಿಮಾ ಹಿರೇಮಠ ಮಾಲಾರ್ಪಣೆ ನೆರವೇರಿಸಿ, ಉಪನ್ಯಾಸಕ ಬಿ.ಎಲ್.ಹಂದಿಗುಂದ ನಿರೂಪಿಸಿದರು.
ಜಿಲ್ಲಾ ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಕೆಎಲ್ಇ ಎಸ್ ಸಿಪಿ ಸಂಸ್ಥೆಯು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಸಿದ್ಧತೆ ಮಾಡಿರುವುದು ನಮ್ಮ ವಿದ್ಯಾರ್ಥಿಗಳಲ್ಲಿ ಕ್ರೀಡಾ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಜೆ ಆರ್ ಚವಡಿ.
ದೈಹಿಕ ಶಿಕ್ಷಕಿ ಬಸವೇಶ್ವರ ಜೂನಿಯರ್ ಕಾಲೇಜ್