ಅಂಬೇಡ್ಕರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಿ
ಧರ್ಮಟ್ಟಿ ಕರೆ: ಡಾ.ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಂ ಜಯಂತ್ಯೋತ್ಸವ
ಮಹಾಲಿಂಗಪುರ 16: ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಲ್ಲದೆ ವಿಶ್ವಕ್ಕೆ ಮಾದರಿಯೂ ಹಾಗೂ ಆದರ್ಶಪ್ರಾಯರೂ ಆಗಿದ್ದಾರೆ ಎಂದು ಬನಹಟ್ಟಿ ನಗರ ಠಾಣಾಧಿಕಾರಿ ರವಿಕುಮಾರ್ ಧರ್ಮಟ್ಟಿ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಸ್ಪೂರ್ತಿ ಯುವ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರ ರವರ 130ನೇ ಹಾಗೂ ಡಾ.ಬಾಬು ಜಗಜೀವನರಾಂ ರ 114ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು ಜೀವನದುದ್ದಕ್ಕೂ ದೇಶದ ಅಖಂಡತೆ ಹಾಗೂ ಸಾಮಾಜಿಕ ಸಮಾನತೆಗೆ ಶ್ರಮಿಸಿದ ಶ್ರೇಷ್ಠ ನಾಯಕರೆಂದು ಡಾ.ಅಂಬೇಡ್ಕರ ಅವರ ಅದರ್ಶಗಳನ್ನು ಹಾಡಿನ ಮೂಲಕ ಬಣ್ಣಿಸಿದರು.
ಡಿ.ಎಸ್.ಎಸ್. ರಾಜ್ಯ ಸಂಚಾಲಕ ಯಮನಪ್ಪ ಗುಣದಾಳ ಮಾತನಾಡಿ, ಬಡವರ, ಶೋಷಿತರ ಕಂಬನಿ ಒರೆಸುವುದಕ್ಕಾಗಿಯೇ ಜನ್ಮತಾಳಿದ ಡಾ.ಬಾಬಾಸಾಹೇಬ ಅಂಬೇಡ್ಕರವರು ಸಮಾನತೆಯನ್ನು ಸಾರುವ ಸಂವಿಧಾನ ರಚಿಸದಿದ್ದರೆ, ಕೆಳವರ್ಗ ಮೇಲ್ವರ್ಗದವರ ಅಡಿಯಾಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಸಂವಿಧಾನದ ಪ್ರಾಧಾನ್ಯತೆಯನ್ನು ವರ್ಣಿಸಿದರು.
ಕಾರ್ಯಕ್ರಮದ ಉದ್ಘಾಟಣೆಯನ್ನು ಶಾಸಕರ ಪುತ್ರ ವಿದ್ಯಾಧರ ಸಿದ್ದು ಸವದಿ, ಗ್ರಾಂ.ಪಂ. ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ನೆರವೇರಿಸಿ, ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕ ಡಿ.ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿ, ಮಲ್ಲಿಕಾರ್ಜುನ ಅಂಬಲೆ ಮಾತನಾಡಿದರು.
ಜಯಂತ್ಯೋತ್ಸವ ನಿಮಿತ್ತ ಗ್ರಾಮದ ಸ್ಪೂರ್ತಿ ಯುವ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಕಳೆದ ಮೂರು ದಿನಗಳಿಂದ ರಕ್ತದಾನ ಶಿಬಿರ ಹಾಗೂ ಗ್ರಾಮ ಸ್ವಚ್ಛತಾ ಕಾರ್ಯಕ್ರಮಗಳು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾದವು.
ಮುಖ್ಯ ಅಥಿತಿಗಳಾಗಿ ಜಿ.ಪಂ. ಸದಸ್ಯ ಪರಶುರಾಮ ಬಸವ್ವಗೋಳ, ತಾ.ಪಂ. ಸದಸ್ಯೆ ಸುವರ್ಣಾ ಶಿಡ್ಲೆವ್ಗೋಳ, ಪಿಕೆಪಿಎಸ್ ನಿರ್ದೇಶಕ ಶಿವಲಿಂಗಪ್ಪಾ ಪಾಟೀಲ, ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ್, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಸುನೀಲ ಹರಿಜನ, ಲವಿತ್ ರಾನಣ್, ಸಿಧ್ಧಾರ್ಥ ದೊಡಮನಿ, ರಮೇಶ ಮೇತ್ರಿ, ಹಣಮಂತ ಕರಿಶೆಟ್ಟಿ, ಗ್ರಾಂಪಂ. ಸದಸ್ಯರು ಸೇರಿದಂತೆ ಹಲವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಅವಿನಾಶ ಬುರಡಿ ಸ್ವಾಗತಿಸಿ, ಉಪನ್ಯಾಸಕ ಭೀಮಶಿ ನೇಗಿನ್ಯಾಳ ಹಾಗೂ ಪತ್ರಕರ್ತ ಲಕ್ಷ್ಮಣ್ ಕಿಶೋರ ನಿರೂಪಿಸಿ, ಶೇಖರ ದೊಡವಾಡ ವಂದಿಸಿದರು.