ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಮತ ಚಲಾಯಿಸಬೇಕು:ಕೇಶವ
ಮುಂಡಗೋಡ:ಚುನಾವಣೆಗಳಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗುತ್ತಿದೆ ಕೆಲವು ಕಡೆ ಮತ ಚಲಾಯಿಸಲು ಮತದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಇಲ್ಲಿನ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೇಶವ ಕೆ. ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಭಾರತ ಚುನಾವಣಾ ಆಯೋಗದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು. ಮತದಾನದ ಕುರಿತು ಅವರು ಮಾಹಿತಿ ನೀಡಿದರು. ತಹಶೀಲ್ದಾರ ಶಂಕರ ಗೌಡಿ ಕಡ್ಡಾಯವಾಗಿ ಮತದಾನ ಯಾಕೆ ಮಾಡಬೇಕು ಎಂಬುದರ ಬಗ್ಗೆ ಮತ್ತು ಮತದಾರರ ನೋಂದಣಿ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಮತದಾರರಿಗೆ ಮತದಾನದ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ವೇಳೆ ತಾ.ಪಂ. ಇಒ ಪ್ರವೀಣ ಕಟ್ಟಿ, ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಪ್ರಭಾರ ಬಿಇಒ ಅಕ್ಕಮಹಾದೇವಿ ಗಾಣಿಗೇರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಇಂದಿರಾ ಬಾಗಲಕೋಟೆ, ರಾಘವೇಂದ್ರ ಗಿರಡ್ಡಿ, ಶ್ರೀಕಾಂತ ಹೊಸಮನಿ, ನವೀನ ಕುಲಕರ್ಣಿ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.