ಅಪೌಷ್ಟಿಕತೆ ನಿವಾರಣೆಗೆ ಸೊಪ್ಪು, ತರಕಾರಿ, ಮೊಳಕೆ ಕಾಳು ಸೇವಿಸಿ: ಕರಜಗಿ

ಅಪೌಷ್ಟಿಕತೆ ನಿವಾರಣೆಗೆ ಸೊಪ್ಪು, ತರಕಾರಿ, ಮೊಳಕೆ ಕಾಳು ಸೇವಿಸಿ: ಕರಜಗಿ
ಇಂಡಿ 09: ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜತೆ ಮೊಳಕೆ ಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಕನ್ನಡ ಶಿಕ್ಷಕ ಬಸವರಾಜ ಕರಜಗಿ ಎಂದರು. ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ರಾಷ್ಟ್ರೀಯ ಪೌಷ್ಟಿಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಬಿಸ್ಕತ್ ನೀಡುವುದರಿಂದ ಪ್ರೊಟೀನ್ ಹಾಗೂ ವಿಟಮಿನ್ ಕೊರತೆ ಉಂಟಾಗುತ್ತದೆ. ಅನ್ನ, ಇಡ್ಲಿಯಲ್ಲೂ ಸಾಕಷ್ಟು ಪ್ರೊಟೀನ್‌ಗಳಿವೆ. ಆದರೆ ಅದನ್ನು ಕ್ರಮಬದ್ಧವಾಗಿ ಮಾಡಿ ಉಣ ಬಡಿಸಬೇಕು. ಸಿರಿಧಾನ್ಯಗಳಿಂದ ಮಾಡಿದ ಉಂಡೆಗಳನ್ನು ನೀಡುವುದರಿಂದ ಪ್ರೊಟೀನ್ ಹಾಗೂ ಪೈಬರ್ ಅಂಶ ಮಕ್ಕಳ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಇಡುತ್ತದೆ ಎಂದು ಹೇಳಿದರು. ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಮಾತನಾಡಿ,ಹಸಿವು, ಅಪೌಷ್ಟಿಕತೆ ನಿವಾರಣೆ ಜಗತ್ತಿನ ಮುಂದಿರುವ ಎರಡು ಜ್ವಲಂತ ಸಮಸ್ಯೆಗಳು. ಇವುಗಳ ನಿರ್ಮೂಲನೆಗಾಗಿ ವಿಶ್ವಸಂಸ್ಥೆ, ಸ್ಥಳೀಯ ಸರ್ಕಾರ, ಸಂಘ ಸಂಸ್ಥೆಗಳು ಅವಿರತ ಶ್ರಮಿಸುತ್ತಿವೆ. ಆದರೂ ಅಪೌಷ್ಟಿಕತೆ ನಿರ್ಮೂಲನೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು. ಆಶಾ ಕಾರ್ಯಕರ್ತೆ ಶೋಭಾ ಸಿಂದ್ರೆ ಭಾಗವಹಿಸಿದ್ದರು.ಎನ್ ಬಿ ಚೌಧರಿ ಸ್ವಾಗತಿಸಿ,ನಿರೂಪಿಸಿದರು. ಸುರೇಶ ದೊಡ್ಯಾಳಕರ ವಂದಿಸಿದರು.

ಸುದ್ದಿ ಓದಿ