ಹೂವಿನ ಹಡಗಲಿ

ಮಳೆ ಕೈಕೊಟ್ಟ ಹಿನ್ನೆಲೆ: ಟ್ಯಾಂಕರ್ ನೀರಿನಿಂದ ಈರುಳ್ಳಿ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ಮಳೆ ಕೈಕೊಟ್ಟ ಹಿನ್ನೆಲೆ: ಟ್ಯಾಂಕರ್ ನೀರಿನಿಂದ ಈರುಳ್ಳಿ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ


ಹೂವಿನಹಡಗಲಿ, ಸೆ.5: ಮಳೆ ಕೈಕೊಟ್ಟಿರುವುದರಿಂದ ಹಾಗೂ ಕೊಳವೆಬಾವಿಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಉಳಿಸಿಕೊಳ್ಳಲು ರೈತರು ದುಬಾರಿ ಬೆಲೆ ತೆತ್ತು ಟ್ಯಾಂಕರ್ ಮೂಲಕ ನೀರು ಖರೀದಿಸುವಂತಾಗಿದೆ.  

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬರುವ ಹಂತದಲ್ಲಿ ಒಣಗಬಾರದು ಎಂಬ ಕಾರಣಕ್ಕೆ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಇದರಿಂದ ಬೆಳೆ ಉಳಿಸಿಕೊಳ್ಳಲು ಹೆಚ್ಚುವರಿ ಹಣ ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.  

ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬಸವಲಿಂಗಪ್ಪ ಎಂಬ ರೈತರು ಕೊಳವೆಬಾವಿ ನೀರನ್ನು ನಂಬಿಕೊಂಡು ನಾಲ್ಕು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಮುಂಗಾರು ಮಳೆ ಸಮರ​‍್ಕವಾಗಿ ಬಾರದ ಹಿನ್ನೆಲೆಯಲ್ಲಿ ಕೊಳವೆಬಾವಿಯೂ ಬತ್ತಿಹೋಗಿದೆ.  

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ನೀರಿನ ಕೊರತೆಯಿಂದ ನಷ್ಟವಾಗಬಾರದು ಎಂಬ ಉದ್ದೇಶದಿಂದ ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ.  

ಮಳೆ ಕೈಕೊಟ್ಟಿರುವ ಪರಿಣಾಮ ಈಗಾಗಲೇ ಬೆಳೆಗಳಿಗೆ ಖರ್ಚು ಮಾಡಿರುವ ಹಣದ ಜತೆಗೆ ಟ್ಯಾಂಕರ್ ನೀರಿಗೂ ಹೆಚ್ಚುವರಿ ಹಣ ಪಾವತಿಸಬೇಕಾದ ಅನಿವಾರ್ಯತೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 


ಸುದ್ದಿ ಓದಿ