ಮಹಲಿಂಗಪುರ

ಧರ್ಮಗ್ರಂಥಗಳ ಪಾರಾಯಣದಂತೆ ಸಂವಿಧಾನವನ್ನೂ ಓದಿ

ಧರ್ಮಗ್ರಂಥಗಳ ಪಾರಾಯಣದಂತೆ ಸಂವಿಧಾನವನ್ನೂ ಓದಿ

ಪ್ರವಚನಕಾರ ಇಬ್ರಾಹಿಂಸಾಹೇಬ್ ಸುತಾರ್ ಕರೆ: ಡಾ. ಅಂಬೇಡ್ಕರ, ಜಗಜೀವನರಾಮ ಜಯಂತಿ ಆಚರಣೆ

ಮಹಾಲಿಂಗಪುರ 15: ನಮ್ಮ ನಮ್ಮ ಧರ್ಮಗ್ರಂಥಗಳನ್ನು ಪಾರಾಯಣ ಮಾಡುವ ಹಾಗೆ ಸಂವಿಧಾನವನ್ನೂ ಕೂಡ ಓದಬೇಕು. ಓದದೆ ಇರುವುದರಿಂದಲೇ ನಮಗೆ ದೊರಕುವ ಹಕ್ಕು-ಭಾದ್ಯತೆಗಳನ್ನು ಕಳೆದುಕೊಳ್ಳುತ್ತಿದ್ದು ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಗಾಳಿಯನ್ನೂ ಸಹ ನಾವು ಭವಿಷ್ಯದಲ್ಲಿ ಕಳೆದುಕೊಳ್ಳಲಿದ್ದೇವೆ ಎಂದು ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಶರಣ ಇಬ್ರಾಹಿಂಸಾಹೇಬ್ ಸುತಾರ್ ಕಳವಳ ವ್ಯಕ್ತಪಡಿಸಿದರು.

ಅವರು ಅಂಜುಮನ್ ಸಭಾಭವನದಲ್ಲಿ ನಗರದ ಸಮಸ್ತ ಮುಸಲ್ಮಾನ್ ಬಾಂಧವರಿಂದ ಪ್ರಥಮ ಬಾರಿ ಏರ್ಪಡಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಜಗಜೀವನರಾಮ್ ಅವರ ಜಯಂತಿಯನ್ನು ಗಣ್ಯರು ಪುಷ್ಪಾರ್ಚನೆಯೊಂದಿಗೆ ನೆರವೇರಿಸಿದ ಈ ಸಂದರ್ಭದಲ್ಲಿ "ಸಂವಿಧಾನ ಓದು"ಎಂಬ ವಿನೂತನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. 

ಜನ ಪ್ರತಿನಿಧಿಗಳು ನಮ್ಮ ಸೇವಕರು, ಇವರಿಂದ ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಪಡೆಯುವ ಮೂಲಕ ದೇಶದ ನೆಮ್ಮದಿ, ಸಹಬಾಳ್ವೆ ಹಾಗೂ ಅಭಿವೃದ್ಧಿಗೆ ಮುನ್ನುಡಿ ಬರೆಯೋಣವೆಂದೂ ಹಾಗೂ ಸಂವಿಧಾನದಲ್ಲಿರುವ ವಿಫುಲ ಅವಕಾಶಗಳನ್ನು ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಬಳಸಿಕೊಳ್ಳಲು ಕರೆ ನೀಡಿ ಈ ಇಬ್ಬರೂ ಮಹಾನ್ ವ್ಯಕ್ತಿಗಳ ಜೀವನಗಾಥೆಯನ್ನು ವಿವರಿಸಿದರು. 

ರಾಜ್ಯ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಗಂಗಾಧರ ಮೇಟಿ ಮಾತನಾಡಿ ಸಂವಿಧಾನ ಶಿಲ್ಪಿಗಳಾದ ಡಾ. ಬಿ.ಆರ್ ಅಂಬೇಡ್ಕರ್ ಅವರು ದೀನ, ದಲಿತ, ಅಲ್ಪಸಂಖ್ಯಾತ ಹಾಗೂ ಶೋಷಿತರಲ್ಲದೆ ಉಳಿದೆಲ್ಲ ವರ್ಗಗಳ ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ದೇಶಕ್ಕೆ ಶ್ರೇμÀ್ಠ ಸಂವಿಧಾನ ಕರಡನ್ನು ನೀಡಿದ್ದಾರೆ. ಶೋμÀಣೆ ಎಲ್ಲಿಯೇ ನಡೆಯುತ್ತಿದ್ದರೂ ಅದರ ವಿರುದ್ಧ ಪ್ರತಿಭಟಿಸುವ ಎಲ್ಲ ಹಕ್ಕುಗಳನ್ನು ಸಂವಿಧಾನದಲ್ಲಿ ವಿವರಿಸಿದ್ದಾರೆ ಎಂದರು.

ಕಾನಿಪ ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ ವಿದೇಶಗಳಲ್ಲಿ ಕಾನೂನು ಪದವಿಗಳನ್ನು ಪಡೆದು ನಾನು ದೇಶಕ್ಕಾಗಿ ಏನಾದರೂ ಮಾಡಬೇಕೆನ್ನುವ ಛಲದೊಂದಿಗೆ ಎಲ್ಲರ ಸಹಕಾರದೊಂದಿಗೆ ದೇಶಕ್ಕೆ ಶ್ರೇಷ್ಟ ಸಂವಿಧಾನವನ್ನು ರಚನೆ ಮಾಡಿ ವಿಶ್ವಜ್ಯೋತಿ ಡಾ.ಅಂಬೇಡಕರರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ 'ಸಂವಿಧಾನ ಓದು' ಎಂಬ ಕೈಪಿಡಿಯನ್ನು ನೀಡಿ ಮಾತನಾಡಿದ ಧುರೀಣ ಜಾವೇದ್ ಭಾಗವಾನ್ ಇದೊಂದು ಒಳ್ಳೆಯ ಪಠ್ಯವಾಗಿದ್ದು ಎಲ್ಲರೂ ಓದಿ ಶ್ರೇಷ್ಠ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಲು ತಿಳಿ ಹೇಳಿದರು. 

ನಿರೂಪಣೆಯನ್ನು ಬೋಧಕರಾದ ಮಹಾಂತೇಶ್ ಪನಸಲ್ಕರ್ ನೆರವೇರಿಸಿ, ಸ್ವಾಗತ ಹಾಗೂ ಮಾಲಾರ್ಪಣೆಯನ್ನು ವರದಿಗಾರ ಮೀರಾ ತಟಗಾರ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಜನಸಾಬ ಪೆಂಡಾರಿ ವಂದಿಸಿದರು.

ವೇದಿಕೆ ಮೇಲೆ ಧುರೀಣರಾದ ಯಲನ್ನಗೌಡ ಪಾಟೀಲ್, ಶಿವಲಿಂಗ ಘಂಟಿ, ಅರ್ಜುನ್ ದೊಡಮನಿ, ಭೀಮಶಿ ಗೌಂಡಿ, ಶಿವಬಸು ಗೌಂಡಿ, ರಾಜು ಗೌಡಪ್ಪಗೋಳ, ಶಿರಾಜ್ ಪಾಂಡು, ಉಸ್ಮಾನ್ ಪೆಂಡಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಎಚ್ ಎಸ್ ಚಿತ್ತರಗಿ, ಹಾಜಿ ಮಿರ್ಜಾಸಾಬ್ ಚಿಕ್ಕೋಡಿ ಅಲ್ಲದೆ ಅಂಜುಮನ್ ಪದಾಧಿಕಾರಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.


ಸುದ್ದಿ ಓದಿ