ಜಾತ್ರೆ, ಮನರಂಜನೆಗಳಿಗೆ ನೀಡುವ ಹಣ ಮಕ್ಕಳ ಶಿಕ್ಷಣಕ್ಕೂ ದೇಣಿಗೆ ರೂಪದಲ್ಲಿ ನೀಡಿರಿ
ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೊತ್ಸಾಹ ಧನ.
ಮಹಾಲಿಂಗಪುರ29: ಉಳ್ಳವರು ಜಾತ್ರೆ, ಮನರಂಜನೆಗಳಿಗೆ ನೀಡುವ ಹಣವನ್ನು ದೇಣಿಗೆ ರೂಪದಲ್ಲಿ ಶಾಲೆಗಳಿಗೂ ನೀಡಿ ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಬೇಕು ಎಂದು ಢವಳೇಶ್ವರದ ಸ್ವಾಮಿ ವಿವೇಕಾನಂದ ಪ್ರತಿಷ್ಟಾನದ ಮಹಾಲಿಂಗ ಪಟ್ಟಣಶೆಟ್ಟಿ ಹೇಳಿದರು.
ಸಮೀಪದ ಕೆಸರಗೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಢವಳೇಶ್ವರದ ಧುರೀಣ ಚೆನ್ನಪ್ಪ ಪಟ್ಟಣಶೆಟ್ಟಿ ಹಮ್ಮಿಕೊಂಡಿದ್ದ ಎಸ್ಸೆಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಹಣ, ಅಧಿಕಾರ ಕೆಲವೊಮ್ಮೆ ಪರಿಶ್ರಮವಿಲ್ಲದೆಯೂ ಸಿಗಬಹುದು ಮತ್ತು ಯಾವಾಗ ಬೇಕಾದರೂ ಕಳೆದೂ ಹೋಗಬಹುದು. ಆದರೆ ವಿದ್ಯೆ ಮತ್ತು ಜ್ಞಾನ ಪರಿಶ್ರಮದಿಂದ ಮಾತ್ರ ಒಲಿಯುವಂತಹದ್ದು, ಅವುಗಳು ಎಂದಿಗೂ ಕಳೆದು ಹೋಗಲಾರವು ಎಂದರು.
ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ, ಪ್ರೋತ್ಸಾಹ ಧನ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ ಚೆನ್ನಪ್ಪ ಪಟ್ಟಣಶೆಟ್ಟಿ ಅವರ ಕಳಕಳಿ ಶ್ಲಾಘನೀಯ ಎಂದರು.
ಭಾಜಪ ಧುರೀಣ ಚೆನ್ನಪ್ಪ ಪಟ್ಟಣಶೆಟ್ಟಿ ಕೆಸರಗೊಪ್ಪ ಪ್ರೌಢಶಾಲೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ 27 ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಎಲ್ಲರಿಗೂ ಸಿಹಿ ಹಂಚಿ, 6 ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ವಿತರಿಸಿದರು.
ಹಿರಿಯ ಪರಪ್ಪ ಬ್ಯಾಕೋಡ, ಎಸ್ಡಿಎಂಸಿ ಅಧ್ಯಕ್ಷ ವಿಠ್ಠಲ ಬನಾಜ, ಗ್ರಾಪಂ ಉಪಾಧ್ಯಕ್ಷ ಹನಮಂತ ಮೋಪಗಾರ, ಗ್ರಾಪಂ ಸದಸ್ಯ ಮಾರುತಿ ಕರೋಶಿ, ಮಹಾಲಿಂಗ ಶಿರೋಳ, ವಿರೂಪಾಕ್ಷ ಉಳ್ಳಾಗಡ್ಡಿ, ಯಮನಪ್ಪ ಉಪ್ಪಾರ, ಸಿದ್ದಲಿಂಗ ಸತ್ತಿಗೇರಿ, ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ, ಮುಖ್ಯ ಶಿಕ್ಷಕ ಸಿ.ವಿ.ಚೌಧರಿ, ಜ್ಯೋತೆಪ್ಪ ಕಪರಟ್ಟಿ, ಬಸವರಾಜ ಮರನೂರ ಇದ್ದರು.