ರಾಮದುರ್ಗ

ಗ್ರಾಹಕರು ಬ್ಯಾಂಕಿನ ವಿಶ್ವಾಸ ಕಳೆದುಕೊಳ್ಳದಿರಲಿ: ರಂಗಪ್ಪ

ಗ್ರಾಹಕರು ಬ್ಯಾಂಕಿನ ವಿಶ್ವಾಸ ಕಳೆದುಕೊಳ್ಳದಿರಲಿ: ರಂಗಪ್ಪ

ರಾಮದುರ್ಗ 19: ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸಾಲ ಕೊಡಲು ಬ್ಯಾಂಕು ಸನ್ನದ್ಧವಾಗಿರುತ್ತವೆ. ಕಟುಬಾಕಿದಾರರಾದರೆ ದೇಶದ ಯಾವುದೇ ಬ್ಯಾಂಕುಗಳಿಂದ ಸಾಲ ದೊರೆಯುವದಿಲ್ಲ. ಹಾಗಾಗಿ ಗ್ರಾಹಕರು ಬ್ಯಾಂಕಿನ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಕೆ.ವಿ.ಜಿ. ಬ್ಯಾಂಕ ಹಿರಿಯ ಪ್ರಬಂಧಕ ಎಂ.ರಂಗಪ್ಪ ಹೇಳಿದರು.

ಸ್ಥಳೀಯ ತಾ.ಪಂ ಸಭಾ ಭವನದಲ್ಲಿ ಪುರಸಭೆ, ಯುನಿಯನ್ ಬ್ಯಾಂಕ, ಕೆ.ವಿ.ಜಿ ಬ್ಯಾಂಕ, ಭಾರತೀಯ ಸ್ಟೇಟ ಬ್ಯಾಂಕ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಪಿ.ಎಂ ಆತ್ಮ ನಿರ್ಭರ್ ನಿಧಿಯಿಂದ ಬ್ಯಾಂಕ ಮೂಲಕ ಸಾಲ ಪಡೆದ ಫಲಾನುಭವಿಗಳಿಗೆ ಡಿಜಿಟಲ್ ವಹಿವಾಟಿನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ  ಮಾತನಾಡಿದರು.

ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರಕಾರ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ ಅಡಿಯಲ್ಲಿ 10 ಸಾವಿರ ರೂ. ಸಾಲ ರೂಪದಲ್ಲಿ ನೀಡಲಾಗುತ್ತಿದ್ದು. ಬೀದಿಬದಿ ವ್ಯಾಪಾರಿಗಳು ಯೋಜನೆ ಸದುಪಯೋಗ ಪಡೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. 

ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಮಾತನಾಡಿ, ಬ್ಯಾಂಕುಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ ಆ್ಯಫ್‍ಗಳ ಮೂಲಕ ಡಿಜಿಟಲ್ ವ್ಯವಹಾರ ಮಾಡಲು ಸುಲಭ ವಿಧಾನಗಳಿವೆ. ಅವುಗಳನ್ನು ಬಳಸುವ ಮೂಲಕ ಕ್ಯಾಶ್‍ಬ್ಯಾಕ್ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಡಿಜಿಟಲ್ ವ್ಯವಹಾರ ಮಾಡುವ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಯುನಿಯನ್ ಬ್ಯಾಂಕ ವ್ಯವಸ್ಥಾಪಕ ಬಿ. ಶ್ರೀಧರ, ಎಸ್.ಬಿ.ಐ ಕೃಷಿ ಅಭಿವೃದ್ಧಿ ಅಧಿಕಾರಿ ಅನಿಮೇಶ ಬ್ಯಾಂಕ ಡಿಜಿಟಲ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.  

ಡೇ-ನಲ್ಮ್ ಸಮುದಾಯ ಸಂಘಟನಾಧಿಕಾರಿ ಮಧು ಕೌಜಲಗಿ ಪ್ರಾಸ್ತಾವಿಕ ಮಾತನಾಡಿ ಪುರಸಭೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಹಕರ ಪರವಾಗಿ ದಾದಾಪೀರ ಕಲೈಗಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಹಾಯಕ ಸಮಾಲೋಚಕಿ ಸ್ವಾಗತಿಸಿ ವಂದಿಸಿದರು. 

ಸುದ್ದಿ ಓದಿ