ಪಟ್ಟಣದ ನಿಯೋಜಿತ ತಾಲೂಕಿನ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ಲವೋ ಅಥವಾ ಅಸಡ್ಡೆ ಭಾವನೆಯೋ..??
ಮಹಾಲಿಂಗಪುರ 09: ಪಟ್ಟಣದ ನಿಯೋಜಿತ ತಾಲೂಕಿನ ಬಗ್ಗೆ ಸರ್ಕಾರಕ್ಕೆನೇ ಸರಿಯಾದ ಮಾಹಿತಿ ಇಲ್ಲವೋ ಅಥವಾ ಒಂದು ತರಹದ ಅಸಡ್ಡೆ ಭಾವನೆಯೋ ಸ್ಥಳೀಯ ಜನರಿಗೆ ಒಂದೂ ತಿಳಿಯುತ್ತಿಲ್ಲ.
ಅದು ಹೇಗೆಂದರೆ ಒಂದು ಕಡೆ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರು ಎರಡೂ ಸದನದಲ್ಲಿ ಉತ್ತರ ನೀಡಬೇಕಾದರೆ ಮಹಾಲಿಂಗಪುರ ಪಟ್ಟಣ ಜಮಖಂಡಿ ತಾಲೂಕಿನಲ್ಲಿದೆ ಎಂಬಂತೆ ಹೇಳುತ್ತಾರೆ. ತೇರದಾಳ ಶಾಸಕ ಸಿದ್ದು ಸವದಿ ಪುನರುಚ್ಚರಿಸಿ ಮುಧೋಳ ತಾಲೂಕಿನಲ್ಲಿದೆ ಎಂದು ಸಚಿವರಿಗೆ ಜ್ಞಾಪಿಸುತ್ತಾರೆ. ಇದು ಹೇಗೆ ಸಾಧ್ಯ ಕಾಟಾಚಾರಕ್ಕೆ ಕಂದಾಯ ಸಚಿವರು ಮಾಹಿತಿ ಇಲ್ಲದೆ ಸದನಕ್ಕೆ ಉತ್ತರ ಕೊಟ್ರಾ ಹೇಗೆ ಎಂಬ ಈ ಭಾಗದ ಜನತೆಗೆ ಸಂಶಯ ಕಾಡುತ್ತಿದೆ.
605 ದಿವಸಗಳಿಂದ ತಾಲೂಕಿಗಾಗಿ ಹೋರಾಡುತ್ತಿರುವ ಸ್ಥಳೀಯರ ಮನೋಭಿಲಾಷೆಗಳನ್ನು ಅರ್ಥ ಮಾಡಿಕ್ಕೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಯಾರೂ ಇಲ್ಲದಂತಾಗಿದೆ. 5 ದಿವಸಗಳ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲೂ ಸ್ಪಷ್ಟ ಭವಿಷ್ಯದ ತಾಲೂಕು ರಚನೆಗೆ ಸಹಕಾರಿಯಾಗುವಂತ ಹೋಬಳಿ ಬಗ್ಗೆಯೂ ನಿರ್ಣಯವಾಗಲೆ ಇಲ್ಲ. ಸ್ಥಳೀಯ ಜನರ ಕೂಗು ಮಹಾಲಿಂಗಪುರಕ್ಕೆ ತಾಲೂಕು ಬೇಕು.ಈ ನಿಟ್ಟಿನಲ್ಲಿ ಕಂದಾಯ ಸಚಿವರು ಈಗ ಅಸಾಧ್ಯವೆಂದು ಸದನದಲ್ಲಿ ಸ್ಪಷ್ಟತೆ ನೀಡಿದ್ದಾರೆ ಸರಿ.
ಶಾಸಕ ಸವದಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾಲಿಂಗಪುರ ಪಟ್ಟಣ ತಾಲೂಕಿಗೆ ಆದೇಶ ಮಾಡಿರುವ ಕಡತ ನೋಡಿ ಎಂದಾಗ ಅದಕ್ಕೆ ಸಮ್ಮತಿಸಿ ಹಾಗೇನಾದರೂ ಇದ್ದರೆ ತಾಲೂಕಿಗಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಇದಕ್ಕೂ ಕೂಡ ಯಾವುದೇ ಆಕ್ಷೇಪ ಇಲ್ಲ. ಆದರೆ ಒಂದು ಮಾತು ಆ ಕಡತ ಮತ್ತೆಲ್ಲೋ ದೂರದಲ್ಲಿ ಇದೆಯೋ ಹೇಗೆ. ಸಿಫಾರಸು ಮಾಡಿರುವ ಕಡತ ಮುಂಚೂಣಿಯಲ್ಲಿ ಇರಬೇಕಾಗಿತ್ತು. ಸರ್ಕಾರವೇ ಸಿಫಾರಸು ಮಾಡಿರುವ ಕಡತ ತಮ್ಮ ಕೈಗೆ ಇಲ್ಲವೆಂದಾದಲ್ಲಿ ಅದು ಕಳುವಾಗಿದೆಯೋ ಹೇಗೆ. ಒಟ್ಟಾರೆಯಾಗಿ ಜನಕ್ಕೆ ಇದರ ಬಗ್ಗೆ ಸ್ಪಷ್ಟನೆ ಬೇಕಾಗಿದೆ.
ಜಮಖಂಡಿ ತಾಲೂಕಿನಲ್ಲಿ ಜಮಖಂಡಿ ಸಹಿತ ರಬಕವಿ /ಬನಹಟ್ಟಿ, ತೇರದಾಳ ಆಗಿವೆಯೋ ಹಾಗೆಯೇ ಅವಿಭಜಿತ ದೊಡ್ಡ ಮುಧೋಳ ತಾಲೂಕನ್ನೂ ಸಹಿತ ವಿಭಜಿಸಿ ಆಡಳಿತ ವಿಕೇಂದ್ರೀಕರಣವಾಗಬೇಕು. ಇದಕ್ಕೆ ಮಹಾಲಿಂಗಪುರ ಪಟ್ಟಣವೂ ಸಹ ತಾಲೂಕಿಗಾಗಿ ಎಲ್ಲ ಅರ್ಹತೆಗಳನ್ನು ಹೊಂದಿದೆ. ಡಿಸೆಂಬರ್ 1ರಂದು ಸ್ಥಳೀಯರು ಆಮರಣ ಉಪವಾಸ ಸತ್ಯಾಗ್ರಹಕ್ಕೆ ಅನಿಯಾದಾಗ ನಾಲ್ಕು ದಿನಗಳ ನಂತರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹಾಗೂ ಎಸಿ, ತಹಶೀಲ್ದಾರ್ ಆಗಮಿಸಿ ಮುಧೋಳ ತಾಲೂಕಿನಲ್ಲಿಯೇ ಹೋಬಳಿ ನೀಡುವ ಭರವಸೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ರಬಕವಿ/ ಬನಹಟ್ಟಿ ತಾಲೂಕಿನಲ್ಲಿ ಮುಂದುವರಿದರೆ ಭವಿಷ್ಯದ ಮಹಾಲಿಂಗಪುರ ತಾಲೂಕು ಮರೀಚಿಕೆ.
ವಿಧಾನ ಪರಿಷತ್ ಸದಸ್ಯ ಹಣ್ಮಂತ ನಿರಾಣಿ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಸದನದ ಶೂನ್ಯ ವೇಳೆಯಲ್ಲಿ ಮಹಾಲಿಂಗಪುರ ತಾಲೂಕಿಗೆ ಧ್ವನಿ ಎತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದ್ದು ಜನತೆಯ ಪರವಾಗಿ ತಾಲೂಕು ಹೋರಾಟ ಸಮಿತಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ಹಿಂದಿನ ಬೊಮ್ಮಾಯಿ ಸರ್ಕಾರ ನೂತನ ತಾಲೂಕಿಗೆ ಆದೇಶ ಮಾಡಿರುವ ವಿಷಯ ಜನತೆಯ ಮುಂದೆ ಬರಬೇಕು ಆಗ ಮಾತ್ರ ಜನತೆಯ ಪ್ರಶ್ನೆಗೆ ಸ್ಪಷ್ಟತೆ ದೊರೆತಂತಾಗುತ್ತದೆ.