ರನ್ನ ಬೆಳಗಲಿಯ ವಸತಿ ರಹಿತ 270 ಫಲಾನುಭವಿಗಳಿಗೆ ಸಚಿವ ಕಾರಜೋಳ ಅವರಿಂದ ಕಾಮಗಾರಿ ಆದೇಶ ಪತ್ರಗಳ ವಿತರಣೆ ; ಪ್ರಸ್ತುತ ಭಾಜಪ ಸರ್ಕಾರ ಮಾಡಿರುವ ಜನಪರ ಕಾರ್ಯಗಳು ಮಾದರಿಯಾಗಿವೆ : ಕಾರಜೋಳ
ಮಹಾಲಿಂಗಪುರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಾಡಿರುವ ಕೆಲಸ ಕಾರ್ಯಗಳಿಗಿಂತಲೂ ಪ್ರಸ್ತುತ ಭಾಜಪ ಸರ್ಕಾರ ಮಾಡಿರುವ ಜನಪರ ಕಾರ್ಯಗಳು ಮಾದರಿಯಾಗಿವೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಸಮೀಪದ ರನ್ನ ಬೆಳಗಲಿ ಪಟ್ಟಣದ ಈಶ್ವರ ಲಿಂಗ ದೇವಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಡಾ. ಬಿ ಆರ್. ಅಂಬೇಡ್ಕರ್ ನಿವಾಸ ಯೋಜನೆ (ಹೆಚ್ಚುವರಿ) ಅಡಿಯಲ್ಲಿ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು 270 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಸೂರು ಇಲ್ಲದೆ ಬದುಕು ಸಾಗಿಸುತ್ತಿರುವ ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಮುಂದೆಯೂ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ದೂರದೃಷ್ಟಿ ಹೊಂದಿದ್ದು ತಾವೆಲ್ಲರೂ ಭಾಜಪ ಪಕ್ಷಕ್ಕೆ ಬಲ ನೀಡಬೇಕು ಎಂದರು.
ಜೈನ ಸಮುದಾಯಕ್ಕೆ 60 ಲಕ್ಷ ರೂಗಳನ್ನು ಮಂಜೂರು ಕೊಡಿಸಿದ ಸಚಿವ ಗೋವಿಂದ ಕಾರಜೋಳ್ ಅವರನ್ನು ಪ್ರಮುಖರು ಸನ್ಮಾನಿಸಿ ಗೌರವಿಸಿದರು.
ಮುಖಂಡರಾದ ಅಶೋಕ ಸಿದ್ದಾಪುರ, ಚಿಕ್ಕಪ್ಪ ನಾಯಕ, ಪಂಡಿತ ಪೂಜಾರ, ಸಿದ್ದುಗೌಡ ಪಾಟೀಲ್, ರಂಗಪ್ಪ ಒಂಟಗೋಡಿ, ದೊಡಹಟ್ಟಿ ವಕೀಲರು, ಮಲ್ಲು ಕ್ವಾನ್ಯಾಗೋಳ, ದನಪಾಲ ಹವಾಲ್ದಾರ, ಮಲ್ಲಪ್ಪ ಮೇಗಾಡಿ, ಮುತ್ತಪ್ಪ ಕುಂಬಾಳೆ, ಗಂಗಪ್ಪ ಮಂಟೂರ, ಮಲ್ಲಪ್ಪ ಮುರನಾಳ, ಮುತ್ತಪ್ಪ ಸಿದ್ದಾಪುರ, ಭುಜಬಲಿ ಹವಾಲ್ದಾರ, ಮುಖ್ಯಾಧಿಕಾರಿ ವಿ ಕಲಾದಗಿ, ಸದಾಶಿವ ಪೂಜಾರಿ, ನಿಂಗಪ್ಪ ಆರೇನಾಡ್, ಲಕ್ಕಪ್ಪ ಸೋನೂನಿ,ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಮಹಾದೇವ ಜೈನ ಇನ್ನೂ ಅನೇಕರಿದ್ದರು.