ರಾಜ್ಯಮಟ್ಟದ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಗೌರವಧನ ವಿತರಣೆ
ಮುದ್ದೇಬಿಹಾಳ 29 : ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಸಮಾಜದ ಕಾರ್ಯಾಲಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿನಿಯರಾದ ಅಪ್ಸನಾ ನದಾಫ್, ಆಸಿಯಾ ಪಿಂಜಾರ, ಮೀನಾಜ್ ನದಾಫ್, ಫರಿದಾಬೇಗಂ ನದಾಫ್, ಸಾನಿಯಾ ಹುನುಕುಂಟಿ ಹಾಗೂ ಸಬಿಯಾ ಕುಂಟೋಜಿ ಅವರಿಗೆ ಪುರಸ್ಕಾರದ ಮೊತ್ತ ವಿತರಿಸಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ತಾಲೂಕು ಹಾಗೂ ಸಮಾಜದ ಕೀರ್ತಿ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಂಘದ ಉದ್ದೇಶವಾಗಿದೆ. ಮೌಲಾನಾ ಮಹಮ್ಮದ್ ರಫೀಕ್ ನದಾಫ್ ಅವರ ಕುರಾನ್ ಪಠಣದೊಂದಿಗೆ ಸಭೆ ಆರಂಭವಾಯಿತು. ತಾಲೂಕು ಘಟಕದ ಅಧ್ಯಕ್ಷ ಮಲಿಕಸಾಬ ನದಾಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು.
ಅವರ ಸಾಧನೆಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನಮ್ಮ ಸಮಾಜದ ವಿದ್ಯಾರ್ಥಿಯ ಸಾಧನೆ ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅದೇ ರೀತಿ ಇಂದಿನ ವಿದ್ಯಾರ್ಥಿಗಳೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಸಮಾಜದ ಗೌರವ ಹೆಚ್ಚಿಸಬೇಕು ಎಂದು ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಎಚ್. ಕಟಗೂರ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಅವರ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಕ್ತುಮಸಾಬ ನದಾಫ್, ಮುತ್ತಣ್ಣ ಮದರಿ, ಹುಸೇನಭಾಷಾ ನದಾಫ್, ಬಷೀರ್ ನದಾಫ್, ಎಚ್.ಐ. ಢವಳಗಿ, ರಜಾಕ್ ಭೈರವಾಡಗಿ, ದಾವಲಸಾಬ ವಾಲಿಕಾರ, ಬಾಬು ನದಾಫ್, ನೂರುಉಲ್ ಮಬಿನ್ ನದಾಫ್, ಮಹಮ್ಮದ್ ರಫೀಕ್ ಕೊಣ್ಣೂರ, ಹುಸೇನಸಾಬ ಕುಂಟೋಜಿ, ರಜಾಕ್ ಮುದ್ನಾಳ್, ತಾಜುದ್ದೀನ್ ಹುನಕುಂಟಿ, ಮೇರುಸಾ ನದಾಫ್, ಲಾಳೇಮಶಾಕ ನದಾಫ್, ಚಂದೇಸಾ ನದಾಫ್, ಕಾಲಿಮಾ ಬೀಳಗಿ, ಖತಿಜಾಬೇಗಂ ನದಾಫ್ ಹಾಗೂ ಶರೀಫಾ ಮುದ್ನಾಳ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ ಸ್ವಾಗತಿಸಿ, ವಂದಿಸಿದರು.