ಮಹಲಿಂಗಪುರ

ಸರ್ಕಾರದಿಂದ ನೇಕಾರರ ಎಲ್ಲ ವಿಧಗಳಲ್ಲಿ ಕಡೆಗಣಣೆ: ಸಿಂಗಾಡಿ ಆರೋಪ

ಸರ್ಕಾರದಿಂದ ನೇಕಾರರ ಎಲ್ಲ ವಿಧಗಳಲ್ಲಿ ಕಡೆಗಣಣೆ: ಸಿಂಗಾಡಿ ಆರೋಪ
ಮಹಾಲಿಂಗಪುರ, ಮೃತ ನೇಕಾರ ಪರಿವಾರಕ್ಕೆ ಕಾಂಗ್ರೆಸ್ ಧುರೀಣರು ಸಾಂತ್ವನ ಹೇಳಿದರು.

ಮಹಾಲಿಂಗಪುರ 13: ರೈತ ಹಾಗೂ ನೇಕಾರು ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎನ್ನುತ್ತ, ಪ್ರಸ್ತುತ ಬಿಎಸ್ವೈ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಸವರುತ್ತ ನೇಕಾರರನ್ನು ಎಲ್ಲ ವಿಧಗಳಲ್ಲಿ ಕಡೆಗಣಿಸುತ್ತಲೇ ಬಂದಿದೆ ಎಂದು ರಬಕವಿ ಬನಹಟ್ಟಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

ಜುಲೈ 11 ರಂದು ರವಿವಾರ ದಿವಸ ರಾತ್ರಿ ನೇಣಿಗೆ ಶರಣಾದ ವೃತ್ತಿಪರ ನೇಕಾರನಾಗಿದ್ದ ಮಲ್ಲಪ್ಪ ಅದೃಶ್ಯಪ್ಪ ಯಡಪ್ಪನವರ್ (36) ಮನೆಗೆ ಪಟ್ಟಣದ ಕಾಂಗ್ರೆಸ್ ಧುರೀಣರು ಹಾಗೂ ನೇಕಾರ ನಾಯಕರೊಂದಿಗೆ ಭೇಟಿ ನೀಡಿ ಅವರ ಪರಿವಾರಕ್ಕೆ ಸಾಂತ್ವನ ತಿಳಿಸಿ ಮಾತನಾಡುತ್ತಿದ್ದರು. 

ಕಳೆದೆರಡು ವರ್ಷಗಳಿಂದ ಕೊರೋನಾ ಲಾಕ್ಡೌನ್ ಹಾಗೂ ಅತಿವೃಷ್ಟಿಯಿಂದ ಪ್ರವಾಹ ತಲೆದೋರಿ ಕೈತುಂಬಾ ಕೆಲಸವಿಲ್ಲದೆ ನೇಕಾರರು ಸೇರಿ ಇನ್ನಿತರೆ ಬಡ ಹಾಗೂ ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದು ಅಲ್ಲದೆ ದಿನೇದಿನೇ ಅಗತ್ಯ ವಸ್ತುಗಳ ಬೆಲೆಗಳೂ ಸಹ ಗಗನಕ್ಕೇರಿ ನೇಕಾರ ವರ್ಗವನ್ನು ಕಂಗೆಡಿಸಿ ಜೀವನ ನಡೆಸುವುದೂ ಕಷ್ಟಕರವಾಗಿ ಸಾಲ ತೀರಿಸಲು ಕಷ್ಟಸಾಧ್ಯವಾಗಿ ನೊಂದು ಬೆಂದು ನೇಣಿಗೆ ಶರಣಾಗುವ ಸ್ಥಿತಿಗೆ ತಲುಪಿದ್ದಾರೆ. ಇಷ್ಟು ಸಾವು-ನೋವುಗಳು ಸಂಭವಿಸಿದರೂ ಕೂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಲೆ ನಿಯಂತ್ರಣ ಗೊಳಿಸುವಲ್ಲಿಯೂ ವಿಫಲಗೊಂಡಿವೆ. ರಾಜ್ಯದಲ್ಲಿ ಜನತೆಯ ಆಹಾಕಾರ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳುವುದು ಉಚಿತ ಹಾಗೂ ಮೃತ ನೇಕಾರ ಕುಟುಂಬಗಳಿಗೆ ಶೀಘ್ರದಲ್ಲಿ ಪರಿಹಾರವನ್ನು ಕೂಡ ನೀಡಬೇಕೆಂದು ಆಗ್ರಹಿಸಿದರು.  

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ ಹಾಗೂ ಯುವ ಧುರೀಣ ಶಂಕರ್ ಸೊನ್ನದ ಮಾತನಾಡಿ, ಪಟ್ಟಣದ ಹ್ಯಾಗಾಡಿ ಫ್ಲಾಟ್ ನಿವಾಸಿ ದಿ.ಮಲ್ಲಪ್ಪ ಯಡಪ್ಪನವರ್ ಅವರ 8ವರ್ಷದ ಒಳಗಿನ 3ಹೆಣ್ಣು ಮಕ್ಕಳನೊಳಗೊಂಡ ಕಡು ಬಡ ಪರಿವಾರವಾರ. ಸಾಲದ ಸುಳಿಗೆ ಸಿಲುಕಿ ಯಜಮಾನನಿಲ್ಲದ ಈ ಪರಿವಾರಕ್ಕೆ ಜೀವನ ಪಥ ದುರ್ಗಮವಾಗಿದ್ದಲ್ಲದೇ ಮೂರು ಚಿಕ್ಕ ಮಕ್ಕಳ ಭವಿಷ್ಯವೂ ಸಹ ಡೋಲಾಯಮಾನವಾಗಿದೆ. ರಾಜ್ಯದಲ್ಲಿ 25 ಜನ ನೇಕಾರರು ಆತ್ಮಹತ್ಯೆಗೆ ಶರಣಾದರೂ ನಾಮಕೆವಾಸ್ತೆಯಂತಿರುವ ಜವಳಿ ಮಂತ್ರಿ ಶ್ರೀಮಂತ ಪಾಟೀಲ್, ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಮೌನವಹಿಸಿರುವುದಲ್ಲದೇ ಕನಿಷ್ಠಪಕ್ಷ ಮೃತ ಕುಟುಂಬಗಳಿಗೆ ಸಾಂತ್ವನ ಹೇಳುವಲ್ಲಿಯೂ ಮೀನಾಮೇಷ ಎಣಿಸುತ್ತಿರುವುದು ನೇಕಾರ ಬಂಧುಗಳಲ್ಲಿ ಆಕ್ರೋಶದ ಕಿಚ್ಚನ್ನು ಹೆಚ್ಚಿಸಿದೆ. ದಿಕ್ಕುತೋಚದ ನೇಕಾರ ದಿ. ಮಲ್ಲಪ್ಪ ಅವರ ಪರಿವಾರಕ್ಕೆ ಸರ್ಕಾರದಿಂದ ಶೀಘ್ರ ಪರಿಹಾರ ನೀಡಿ ಕುಟುಂಬ ಪುನಶ್ಚೇತನಗೊಳ್ಳಲು ಮತ್ತು ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ನೇಕಾರ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮುಖಾಂತರ ಅವರ ಬದುಕಿಗೆ ಸಹಕಾರಿಯಾಗಬೇಕು ಎಂದರು. 

ಮೃತನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣರಾದ, ಮಹಾಲಿಂಗಪ್ಪ ಲಾತೂರ್, ಹೊಳೆಪ್ಪ ಬಾಡಿಗಿ, ಬಸವರಾಜ್ ಬುರುಡ, ಮಹಾಲಿಂಗಪ್ಪ ಕಂದಗಲ್, ಶಿವಾನಂದ ಮರೆಗುದ್ದಿ, ದಾನಪ್ಪ ಯಡಪ್ಪನವರ್, ಶಿವಪ್ಪ ಮೂಡಲಗಿ, ಬಸಪ್ಪ ಲಂಗೋಟಿ, ಎಸ್‌. ಎಂ. ಹಾರೂಗೊಪ್ಪ, ಅಡಿವಪ್ಪ ಹುಣಶಾಳ ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ