ರೋಣ

ಮಾನವ ದಿನಗಳ ಸೃಷ್ಟಿಸದಿದ್ದರೆ ಶಿಸ್ತು ಕ್ರಮ: ಸಿಇಒ ಮುಕುಲ್ ಜೈನ್ ಎಚ್ಚರಿಕೆ

ಮಾನವ ದಿನಗಳ ಸೃಷ್ಟಿಸದಿದ್ದರೆ ಶಿಸ್ತು ಕ್ರಮ: ಸಿಇಒ ಮುಕುಲ್ ಜೈನ್ ಎಚ್ಚರಿಕೆ


ರೋಣ: ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಷ್ಟಿ ಕಡಿಮೆಯಾಗಿದ್ದು, ಗ್ರಾಮೀಣರಿಗೆ ಸಮರ​‍್ಕವಾಗಿ ಕೆಲಸ ಒದಗಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಎಚ್ಚರಿಕೆ ನೀಡಿದರು.  

ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಬಿ-ರಾಮ್‌-ಜಿ ಯೋಜನೆಯಡಿ 125 ದಿನಗಳವರೆಗೆ ಉದ್ಯೋಗ ಒದಗಿಸಲು ಸಾಕಷ್ಟು ಅವಕಾಶಗಳಿವೆ. ಆದರೂ ಗ್ರಾಮೀಣರಿಗೆ ಕೆಲಸ ಒದಗಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯಡಿ ಕೆಲಸಗಳನ್ನು ಕಡ್ಡಾಯವಾಗಿ ಒದಗಿಸಬೇಕು. ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.  

ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆಯಲ್ಲಿ ಸೇರಿಸದ ಸಾಮೂಹಿಕ ಕಾಮಗಾರಿಗಳನ್ನು ಗುರುತಿಸಿ, ಹೆಚ್ಚುವರಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದ ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.  

ಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಸೃಷ್ಟಿ ಶೂನ್ಯವಾಗಿರುವ ಕುರಿತು ಪಿಡಿಒ ಲಕ್ಷ್ಮೀ ಗೋಡಿ ಅವರನ್ನು ಪ್ರಶ್ನಿಸಿದ ಅವರು, ಗ್ರಾಮಸಭೆಗಳನ್ನು ನಿಯಮಾನುಸಾರ ನಡೆಸಿ, ನಿರ್ಣಯಗಳನ್ನು ಪಂಚಾಯತ್ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.  

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ (ಖಘಒ) ಘಟಕಗಳು ಕಡ್ಡಾಯವಾಗಿ ಇರಬೇಕು. ಘಟಕಗಳಿಲ್ಲದ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಕ್ರಿಯಾ ಯೋಜನೆಯಡಿ ಅವುಗಳನ್ನು ಸ್ಥಾಪಿಸಬೇಕು. ಘನತ್ಯಾಜ್ಯ ನಿರ್ವಹಣಾ ವಾಹನಗಳಿಗೆ ಮಹಿಳಾ ಚಾಲಕರನ್ನು ನೇಮಿಸದಿದ್ದಲ್ಲಿ ತಕ್ಷಣ ನೇಮಕಾತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.  

ಸಂಜೀವಿನಿ ಯೋಜನೆ, ವಸತಿ ಯೋಜನೆ, ಃಖಖ ಹಾಗೂ ಸಕಾಲ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯನ್ನು ಪರೀಶೀಲಿಸಿದ ಅವರು, ಒಂದು ವಾರದೊಳಗೆ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಇದಕ್ಕೂ ಮೊದಲು ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆ ಪುನಶ್ಚೇತನ ಕಾಮಗಾರಿಯನ್ನು ಪರೀಶೀಲಿಸಿದ ಸಿಇಒ, ವಿಬಿ-ರಾಮ್‌-ಜಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿದರು. ನಿರಂತರವಾಗಿ ಕೆಲಸ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೆಲಸ ಬೇಕಿರುವವರು ಗ್ರಾಮ ಪಂಚಾಯಿತಿಗೆ ನಮೂನೆ-6 ಸಲ್ಲಿಸಬೇಕು ಎಂದು ತಿಳಿಸಲಾಯಿತು.  

ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವನಗೌಡ ಮೆಣಸಗಿ, ಉಪ ಕಾರ್ಯದರ್ಶಿ ಸಿ.ಆರ್‌. ಮುಂಡರಗಿ, ಜಿಲ್ಲಾ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ಸಹಾಯಕ ಲೆಕ್ಕಾಧಿಕಾರಿ ದೇವರಾಜ್ ಸಜ್ಜನಶೆಟ್ಟರ್, ತಾಲ್ಲೂಕು ಯೋಜನಾಧಿಕಾರಿ ಸಿ.ಎಸ್‌. ನಿಲಗುಂದ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಯೋಜನಾ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ