ಅ.28, ಬೆಳಿಗ್ಗೆ 11 ಕ್ಕೆ ಏಕ ಕಾಲಕ್ಕೆ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ ಕವಿತೆ ಹಾಡಬೇಕು : ವಿಭಿನ್ನ ಹಾಗೂ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ : ಎಚ್‌.ಕೆ. ಕೃಷ್ಣಮೂರ್ತಿ

ಅ.28, ಬೆಳಿಗ್ಗೆ 11 ಕ್ಕೆ  ಏಕ ಕಾಲಕ್ಕೆ  ಕುವೆಂಪು ರಚಿತ  ಬಾರಿಸು ಕನ್ನಡ ಡಿಂಡಿಮವ ಕವಿತೆ ಹಾಡಬೇಕು :   ವಿಭಿನ್ನ ಹಾಗೂ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ :  ಎಚ್‌.ಕೆ. ಕೃಷ್ಣಮೂರ್ತಿ


ಕಾರವಾರ : ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ವಿಶೇಷ ಮತ್ತು ವಿಭಿನ್ನವಾಗಿ ಆಚರಿಸುವ ಕಾರ್ಯವಾಗಬೇಕೆಂದು ಅಪರ ಜಿಲ್ಲಾಧಿಕಾರಿ ಹೆಚ್‌.ಕೆ. ಕೃಷ್ಣಮೂರ್ತಿ ಹೇಳಿದರು. 

 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನವೆಂಬರ 1 ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಕುರಿತು ಪೂರ್ವಭಾವಿ ಸಭೆಯ ನಡೆಸಿ ಮಾತನಾಡಿದ ಅವರು,  ರಾಜ್ಯ ಸರ್ಕಾರದ ನಿರ್ದೇಶನದಂತೆ ಕನ್ನಡಕ್ಕಾಗಿ ನಾವು ಅಭಿಯಾನದಡಿ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ, ಕನ್ನಡ ಗೀತೆಗಳ ಗಾಯನ, ಕನ್ನಡದಲ್ಲೇ ಮಾತು, ಕನ್ನಡದಲ್ಲೇ ಬರವಣಿಗೆ, ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು ನುಡಿಯ ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು.   

ಅಕ್ಟೋಬರ್ 28, ಬೆಳಿಗ್ಗೆ 11:00 ಗಂಟೆಗೆ ಕನ್ನಡದ ಶ್ರೇಷ್ಠತೆ ಸಾರುವ ಡಾ.ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ", ಡಾ. ಕೆ.ಎಸ್‌.ನಿಸಾರ್ ಅಹಮದ್‌ರವರ “ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಈ ಮೂರು ಗೀತೆಗಳನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಹಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ನುರಿತ ಸಂಗೀತ ಶಿಕ್ಷರನ್ನು ಆಯ್ಕೆ ಮಾಡಿಕೊಂಡು ಶಾಲಾ ಮಕ್ಕಳಿಂದ  ಎರಡು ಬಾರಿ ಪೂರ್ವಾಭ್ಯಾಸ ನಡೆಸಿ, ಅಕ್ಟೋಬರ್ 28, 11:00 ಜಿಲ್ಲೆಯ ವಿವಿಧಡೆಯಲ್ಲಿ ಆಚರಿಸುವಂತೆ ಆಯೋಜಿಸಬೇಕೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ  ವಿ, ಸುನೀಲಕುಮಾರ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ  ವಿವಿಧ ಜಿಲ್ಲಾ ಮತ್ತು ತಾಲೂಕಾಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಕನ್ನಡಕ್ಕಾಗಿ ನಾವು - ಅಭಿಯಾನ'' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು. ನ.1 ರಂದು  ಬೆಳಿಗ್ಗೆ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡಾಂಬೆ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ ನಗರಾದ್ಯಂತ ಮೆರವಣಿಗೆಗೆ ಚಾಲನೆ ನೀಡಲಿದ್ದು,  ನಗರಾದ್ಯಂತ ಎಲ್ಲ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ, ನಗರದ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು. ಪೊಲೀಸ್ ಕವಾಯತು ಮೈದಾದಲ್ಲಿ ಸರಿಯಾಗಿ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ಮಾಡುವುದು, ಪಥಸಂಚನೆ, ಸಚಿವರಿಂದ ರಾಜ್ಯೋತ್ಸವದ ಸಂದೇಶ ಹಾಗೂ ಗಣ್ಯರ ಆಹ್ವಾನ ಎಲ್ಲವೂ ಶಿಸ್ತುಬದ್ದವಾಗಿ ಮತ್ತು ಶಿಷ್ಠಾಚಾರದಂತೆ ನಡೆಯಬೇಕೆಂದು ಎಂದು ಅವರು ತಿಳಿಸಿದರು.ಕರೋನಾ  ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ  ಕೋವಿಡ್ 19 ನ ಮಾರ್ಗಸೂಚಿ ಕ್ರಮಗಳನ್ನು ಎಲ್ಲರು ಪಾಲಿಸುವಂತೆ ನೋಡಿಕೊಳ್ಳಬೇಕು ಮತ್ತು  ಪ್ರಥಮ ಚಿಕಿತ್ಸಾ ಹಾಗೂ ಅಗತ್ಯ ವೈದ್ಯಕೀಯ ವ್ಯವಸ್ಥೆಯೊಂದಿಗೆ ಸಿದ್ದರಿರಬೇಕೆಂದು  ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಆಡಳಿತ ವಿಭಾಗದ ಉಪಕಾರ್ಯದರ್ಶಿ ನಾಗೇಶ ರಾಯ್ಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ