ಇಟ್ಟಂಗಿಹಾಳ ಕೆರೆಗೆ ನೀರು ಹರಿಸಲು ಆಗ್ರಹ: ರೈತರ ಬೃಹತ್ ಪ್ರತಿಭಟನೆ
ವಿಜಯಪುರ, ಆ.11: ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದ ಕೆರೆಗೆ ತಕ್ಷಣ ನೀರು ಹರಿಸಿ ಸಂಪೂರ್ಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ರೈತ ಭಾರತ ಪಕ್ಷದ ಪದಾಧಿಕಾರಿಗಳು ಹಾಗೂ ಸ್ಥಳೀಯ ರೈತರು ಕೆರೆ ಆವರಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದ ಕೆರೆ ನೀರಿಲ್ಲದೆ ಸಂಪೂರ್ಣ ಒಣಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಜಾನುವಾರುಗಳು ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಇಕ್ಕಡಿ, ಜಿಲ್ಲೆಯ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಸಚಿವ ಎಂ.ಬಿ. ಪಾಟೀಲ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
“ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಒಂದೆರಡು ಭಾಗಗಳಿಗೆ ಮಾತ್ರ ನೀರು ಹರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇಟ್ಟಂಗಿಹಾಳ ಸೇರಿದಂತೆ ಈ ಭಾಗದ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಮಳೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಗ್ರಾಮವನ್ನು ನಿರ್ಲಕ್ಷಿಸುವುದು ಸರಿಯಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಸಮೀಪದ ಕಾಲುವೆ ಅಥವಾ ಏತ ನೀರಾವರಿ ಯೋಜನೆಯ ಮೂಲಕ ಕೂಡಲೇ ಇಟ್ಟಂಗಿಹಾಳ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೆರೆ ಭರ್ತಿಯಾದರೆ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಜಾನುವಾರುಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಕೆರೆಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಹೆದ್ದಾರಿ ತಡೆ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಗ್ರಾಮದ ಮುಖಂಡ ಸಿಕಂದರ್ ದೊಡ್ಡಮನಿ ಮಾತನಾಡಿ, ಕೆರೆಗೆ ನೀರು ಹರಿಸುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಕೇವಲ ಭರವಸೆ ನೀಡಲಾಗಿದೆಯೇ ಹೊರತು ಯಾವುದೇ ಕಾರ್ಯರೂಪದ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಭಾರತ ಪಕ್ಷದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಇಟ್ಟಂಗಿಹಾಳ ಕೆರೆಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿದರು.
ಸಿದ್ದಲಿಂಗ ಪರಗೊಂಡ ತಂಗಡಿ, ರಮೇಶ ತಂಗಡಿ, ಸಂಜು ವಿಠ್ಠಲ ಮುಚ್ಚಂಡಿ, ಶರಣಪ್ಪ ಮುಚ್ಚಂಡಿ, ಕಲ್ಲಪ್ಪ ದಳವಾಯಿ, ಅಣ್ಣಾರಾಯ ಹುನಸಿಕಟ್ಟಿ, ವಾಚು ಕಾಬರಿ ರಾಥೋಡ್, ಪಾಂಡು ಶಂಕರ್ ತಾಂಬೆ, ಕಾಡಪ್ಪ ಇಟ್ಟಂಗಿಹಾಳ, ಅಮೋಘ ಕಾಳೆ, ಸೋಪಾನ ಕರಾತ, ಅಮೋಘಿ ತಾಂಬೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.