ವರ್ಗಾವಣೆ ಯಾದರೂ ಪೀರನವಾಡಿಯಲ್ಲಿ ಮುಂದೆ ನಿಂತು ಕರ್ತವ್ಯ ನಿರ್ವಹಿಸಿದ ಡಿಸಿಪಿ ಸೀಮಾ ಲಾಟಕರ್
ಬೆಳಗಾವಿ, ಆಗಷ್, 28 : ವರ್ಗಾವಣೆ ಆದೇಶ ಹೊರಬಿದ್ದರೆ ಸಾಕು. ಸುದ್ದಿ ಇಲ್ಲದಂತೆ ಜಾಗವ ಖಾಲಿ ಮಾಡುವ ಅಧಿಕಾರಿಗಳ ಸಂಖ್ಯೆಯೇ ಹೆಚ್ಚು. ಆದರೆ ಕಳೆದ ಎರಡು ದಿನಗಳ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್ ಅವರು ವರ್ಗಾವಣೆ ಆದರೂ ಸದ್ಯ ಬೆಳಗಾವಿ ನಗರದಲ್ಲಿ ವಿಷಮ ಪರಿಸ್ಥಿತಿ ಇರುವುದರಿಂದ ಅಧಿಕಾರ ಹಸ್ತಾಂತರಿಸದೇ ಮುಂದೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೌದು ಬೆಳಗಾವಿ ನಗರದಲ್ಲಿ ಕರ್ತವ್ಯ ನಿರ್ವಹಿಸಲು ಅನೇಕ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಇಲ್ಲಿನ ಗಡಿ, ಭಾಷಾ ವಿವಾದದ ಗಲಾಟೆ ಹಾಗೂ ಕೋಮು ಗಲಭೆಗಳಿಂದಾಗಿ ದೇಶ ಹಾಗೂ ರಾಜ್ಯದ ಗಮನ ಸೆಳೆಯುತ್ತಿದ್ದ ಬೆಳಗಾವಿ ನಗರದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಿದ್ದರು. ಅಲ್ಲದೇ ಸರ್ಕಾರದ ಆದೇಶ ಪಾಲನೆಗಾಗಿ ಕೆಲವು ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ತೆರೆಯ ಹಿಂದೆಯೇ ಕೆಲಸ ನಿರ್ವಹಿಸಿ ಜಾಗ ಕಾಲಿ ಮಾಡುತ್ತಿದ್ದರು.
ಬೆಳಗಾವಿ ನಗರದ ಸಮೀಪದಲ್ಲಿರುವ ಪೀರನವಾಡಿ ವೃತ್ತದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣ ವಿಷಯವಾಗಿ ಕಳೆದ 14 ದಿನಗಳಿಂದ ವಿವಾದ ಉಂಟಾಗಿದೆ. ವೃತದಲ್ಲಿಯೇ ರಾಯಣ್ಣನ ಪುತ್ಥಳಿ ನಿರ್ಮಾಣ ಮಾಡುವುದಾಗಿ ರಾಯಣ್ಣ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದು ಬೆಳಗಾವಿ ಅಷ್ಟೇ ಅಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿಗೆ ಬಂದು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.
ಅಭಿಮಾನಿಗಳ ಭಾವನಾತ್ಮಕ ಮನವಿಗೆ ಸ್ಪಂದಿಸದ ಸರ್ಕಾರದ ನಡೆಯಿಂದ ಬೇಸತ್ತ ಕನ್ನಡಪರ ಹೋರಾಟಗಾರರು ಶುಕ್ರವಾರ ಬೆಳ್ಳಂ ಬೆಳಿಗ್ಗೆ ಉದ್ದೇಶಿತ ವೃತ್ತದಲ್ಲಿಯೇ ಪುತ್ಥಳಿ ಪ್ರತಿಷ್ಟಾಪನೆ ಮಾಡಿದ್ದಲ್ಲದೆ ವಿಜ್ರಂಭಣೆಯನ್ನು ಮಾಡಿವೆ.
ಇದರಿಂದಾಗಿ ಶಿವಾಜಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಿಂದ ನಗರದಲ್ಲಿ ಉದ್ವಿಗ್ನತೆ ವಾತಾವರಣ ಉಂಟಾಗಿದೆ. ನಗರದಲ್ಲಿ ಯಾವ ಸಮಯದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂಬ ಆತಂಕ ನಗರದ ಜನರಲ್ಲಿ ಉಂಟಾಗಿದೆ. ಇದರಿಂದಾಗಿ ನಗರದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಧಕ್ಕೆ ಉಂಟಾಗಬಾರದು ಎಂಬ ಉದ್ದೆಶದಿಂದ ವರ್ಗಾವಣೆ ಆದೇಶ ಕೈ ಸೇರಿದ್ದರೂ, ಅಧಿಕಾರ ಹಸ್ತಾಂತರ ಮಾಡದೇ ಡಿಸಿಪಿ ಸೀಮಾ ಲಾಟ್ಕರ್ ಅವರು, ಬೆಳ್ಳಂ ಬೆಳಿಗ್ಗೆ ವಿವಾದಿತ ಸ್ಥಳಕ್ಕೆ ತೆರಳಿ ಬೀಡು ಬಿಟ್ಟಿದ್ದಾರೆ. ಜತೆಗೆ ಎರಡು ಗುಂಪಿನ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ನಂತರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಒಟ್ಟಿನಲ್ಲಿ ವರ್ಗಾವಣೆ ಆದೇಶ ಕೈ ಸೇರಿದ್ದರೂ ವೀರರಾಣಿ ಚನ್ನಮ್ಮಳಂತೆ ಡಿಸಿಪಿ ಸೀಮಾ ಲಾಟ್ಕರ್ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.