ಇಂಡಿ

ಸಾರ್ವಜನಿಕರು ಕೊರೋನಾ ಬಗ್ಗೆ ನಿರ್ಲಕ್ಷ ಭಾವ ಬಿಟ್ಟು ಜಾಗೃತರಾಗಿ: ಸಿಂಧೆ

ಸಾರ್ವಜನಿಕರು ಕೊರೋನಾ ಬಗ್ಗೆ ನಿರ್ಲಕ್ಷ ಭಾವ ಬಿಟ್ಟು ಜಾಗೃತರಾಗಿ: ಸಿಂಧೆ

ಇಂಡಿ 19: ಕಳೆದ ಒಂದು ವರ್ಷದಿಂದ ಈ ಕೊರೋನಾ ಮಹಾಮಾರಿ ನಮ್ಮನ್ನೆಲ್ಲ ಬೆನ್ನು ಹತ್ತಿದೆ. ಇದರಿಂದ ಸಾಕಷ್ಟು ಸಾವು-ನೋವು ಸಂಭವಿಸಿವೆ. ಸಧ್ಯ ಎರಡನೇ ಅಲೆ ಪ್ರಾರಂಭವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಕಾಣಸಿಗುತ್ತಿದ್ದು ಪ್ರತೀ ದಿನ ನೂರರ ಆಸು-ಪಾಸಿನಲ್ಲಿ ಸಾವು ಸಂಭವಿಸುತ್ತಿವೆ. ಹೀಗಾಗಿ ಸಾರ್ವಜನಿಕರು ಕೊರೋನಾ ಬಗ್ಗೆ ನಿರ್ಲಕ್ಷ ಭಾವ ಬಿಟ್ಟು ಜಾಗೃತರಾಗಿರಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹೇಳಿದರು.

ನಗರದಲ್ಲಿ ಕಂದಾಯ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಮತ್ತು ಪೊಲೀಸ್ ಉಪಾಧೀಕ್ಷಕ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಕೋವಿಡ್-19 ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಮನೆಯಿಂದ ಹೊರಗೆ ಹೋಗಲು ಸಜ್ಜಾದರೆ ಕಡ್ಡಾಯವಾಗಿ ಜೇಬಿನಲ್ಲಿ ಸ್ಯಾನಿಟೈಜರ್, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಜನಜಂಗುಳಿ ಪ್ರದೇಶದಲ್ಲಿ ಅಡ್ಡಾಡಬೇಡಿ, ಕಾರ್ಯಕ್ರಮಗಳಿಗೆ ಹೋಗಲೇಬೇಡಿ, ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಕೊರೋನಾ ಹಾವಳಿ ಮುಗಿಯುವವರೆಗೆ ಮುಂದೂಡಿ ಎಂದು ಸಲಹೆ ನೀಡುವುದಲ್ಲದೆ ಅಲ್ಲಿ ಸೇರಿದ ಜನರಿಗೆ ಮಾಸ್ಕ್ ವಿತರಣೆ ಮಾಡಿದರು.

ಡಿವೈಎಸ್‍ಪಿ ಶ್ರೀಧರ ದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮುರಾಳ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ಆರ್.ಟಿ. ಕೋಳೆಕರ್ ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.

ಸುದ್ದಿ ಓದಿ