ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ : ವಿಶ್ವಾಸ ವೈದ್ಯ
ಸವದತ್ತಿ 06: ಪರಿಸರ ಮನುಷ್ಯನಿಗಷ್ಟೇ ಸೀಮಿತವಲ್ಲ. ಅದು ಸಕಲ ಜೀವರಾಶಿಯ ಸ್ವತ್ತಾಗಿದೆ, ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಇಲ್ಲಿನ ಎಪಿಎಂಸಿ ವೃತ್ತದಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 70 ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಜರುಗಿದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಜೊತೆಗೆ ಮುಂದಿನ ಪೀಳಿಗೆಗೂ ಈ ಸಂಪತ್ತಿನ ಲಾಭ ದೊರೆಯುವಂತಾಗಲು ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.ತಹಶೀಲ್ದಾರ ಎಮ್.ಎನ್. ಹೆಗ್ಗನ್ನವರ ಮಾತನಾಡಿ,ಅರಣ್ಯ ರಕ್ಷಣೆ ಅರಣ್ಯ ಇಲಾಖೆಯ ಕೆಲಸ ಮಾತ್ರ ಅಲ್ಲ. ಪ್ರತಿಯೊಬ್ಬರೂ ಅರಣ್ಯ ಇಲಾಖೆ ಜೊತೆ ಕೈಜೋಡಿಸಬೇಕು. ನೆಲ, ಜಲ, ನಾಡಿನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಸಂಜೀವ ಸಂಶುದ್ಧಿ ಮಾತನಾಡಿ, ವನ್ಯಜೀವಿಗಳೇ ಬಹುದೊಡ್ಡ ಸಂಪತ್ತು. ಅವುಗಳ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 2 ರಿಂದ 8 ರವರೆಗೆ ಸಪ್ತಾಹ ಆಚರಿಸಲಾಗುತ್ತಿದೆ. ಪೋಷಕರು ಮತ್ತು ಸಮಾಜಕ್ಕೆ ತಿಳಿ ಹೇಳುವ ಸಾಮಥ್ರ್ಯ ಮಕ್ಕಳಲ್ಲಿದೆ. ದೊಡ್ಡ ಬದಲಾವಣೆಯನ್ನೇ ಅವರು ತರಬಲ್ಲರು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸಕ್ರಿಯವಾಗಿ ಅವರನ್ನು ಭಾಗವಹಿಸುವಂತೆ ಮಾಡಲಾಗುತ್ತಿದೆ ಎಂದರು.
ಎಪಿಎಂಸಿ ವೃತ್ತದಿಂದ ಪ್ರಾರಂಭವಾದ ಜಾಗೃತಿ ಜಾಥಾ ಗುರುಭವನ ತಲುಪಿತು.ಈ ವೇಳೆ ತಾಪಂ ಇಒ ಆನಂದ ಬಡಕುಂದ್ರಿ, ಬಿಇಒ ಮೋಹನ ದಂಡಿನ, ನೀಹಾ ತೋರಗಲ, ಕಿರಣ ಕುರಿ, ಬಸವರಾಜ ಉಪ್ಪಾರ, ಅಡಿವೆಪ್ಪ ಗೋಡಲಕುಂದರಗಿ, ವಿನೋದ ಜೈನಾಪೂರ, ಪ್ರವೀಣ ತುರಮುರಿ ಹಾಗೂ ಸಿಬ್ಬಂದಿ ಇದ್ದರು.