ಚಿರತೆ ಹಿಡಿಯಲು ಲಾಠಿಯೊಂದಿಗೆ ಬಂದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು

ಚಿರತೆ ಹಿಡಿಯಲು ಲಾಠಿಯೊಂದಿಗೆ ಬಂದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು

ಗಾಲ್ಫ್‌ ಮೈದಾನದಲ್ಲಿ ಕೆಲಹೊತ್ತು ಪ್ರತಿಭಟನೆ: ಅರಣ್ಯ ಸಚಿವ ಉಮೇಶ ಕತ್ತಿ ವಿರುದ್ಧ ಆಕ್ರೋಶ 

ಬೆಳಗಾವಿ 28: ನಗರದ ಗಾಲ್ಫ್‌ ಮೈದಾನದಲ್ಲಿ ಚಿರತೆ ಸಿಗದ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಂಬಲಿತ ಕಾಂಗ್ರೆಸ್ ನಾವೇ ಚಿರತೆಯನ್ನು ಸೆರೆ ಹಿಡಿಯುತ್ತೇವೆ ಎಂದು ಕೈಯಲ್ಲಿ ಕೋಲು ಹಿಡಿದು ಗಾಲ್ಫ್‌ ಮೈದಾನದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಅಲ್ಲದೆ ಅರಣ್ಯ ಸಚಿವ ಉಮೇಶ ಕತ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ರವಿವಾರ ನಗರದ ಗಾಲ್ಫ್‌ ಮೈದಾನಕ್ಕೆ ಕೈಯಲ್ಲಿ ಕೋಲು ಹಿಡಿದು, ಗೇಟ್ ಹತ್ತಿ ಸತೀಶ್ ಜಾರಕಿಹೊಳಿ ಬೆಂಬಲಿತ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಸರಕಾರ ಮತ್ತು ಸಚಿವ ಉಮೇಶ ಕತ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಲ್ಫ್‌ ಮೈದಾನದ ಗೇಟ್ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕಿ ಆಯೀಶಾ ಸನದಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲಾಠಿ ಹಿಡಿದು 10 ಜನ ಮಹಿಳಾ ಕಾರ್ಯಕರ್ತರು ಬಂದಿದ್ದರು. 

ಈ ವೇಳೆ ಸಚಿವ ಉಮೇಶ ಕತ್ತಿಯವರೇ ಸತೀಶ್ ಜಾರಕಿಹೊಳಿ ಅವರನ್ನ ಸೋಲಿಸ್ತಿವಿ ಅಂತಾ ಹೇಳ್ತಿದ್ದಿರಿ, ಆದ್ರೆ ನಿಮ್ಮ ಕೈಯಿಂದ ಚಿರತೆ ಹಿಡಿಯುವುದಕ್ಕೆ ಆಗುತ್ತಿಲ್ಲ. ಇನ್ನು ನಮ್ಮ ಸತೀಶ ಜಾರಕಿಹೊಳಿ ಅವರನ್ನು ಏನು ಸೋಲಿಸುತ್ತಿರಿ..? ಮೊದಲು ಚಿರತೆ ಹಿಡಿದು ಜನರ ಜೀವವನ್ನು ಕಾಪಾಡಿಸಿ ಎಂದು ಕಿಡಿಕಾರಿದರು.  

ಸಚಿವ ಉಮೇಶ ಕತ್ತಿ ವಿರುದ್ಧ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ 24 ದಿನಗಳಿಂದ ಚಿರತೆ ಶೋಧ ಕಾರ್ಯ ನಡೆಯುತ್ತಿದೆ. ಆದರೂ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಸತೀಶ ಜಾರಕಿಹೊಳಿ ಬೆಂಬಲಿತ ಮಹಿಳೆಯರು ಪ್ರತಿಭಟನೆ ನಡೆಸಿದರು.  

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡೆ ಆಯಿಷಾ ಸನದಿ, 25 ದಿನಗಳಿಂದ ಹಣ ಖರ್ಚು ಮಾಡಿ ಕಾರ್ಯಾಚರಣೆ ಮಾಡಿದರೂ ಚಿರತೆ ಹಿಡಿಯಲು ಇವರಿಂದ ಆಗುತ್ತಿಲ್ಲ. ಉಮೇಶ ಕತ್ತಿ ಅವರು ದೊಡ್ಡ ದೊಡ್ಡ ಮಾತನಾಡುತ್ತಾರೆ. ಆದರೆ ಇಷ್ಟೇಲ್ಲಾ ಸಮಸ್ಯೆ ಆಗುತ್ತಿದ್ದರೂ ಒಂದು ದಿನವೂ ಇಲ್ಲಿಗೆ ಭೇಟಿ ನೀಡಿಲ್ಲ. ಇವರು ಏನು ಜನಸೇವೆ ಮಾಡುತ್ತಾರೆ..?  

ಮಕ್ಕಳ ಶಾಲೆಗಳಿಗೆ ರಜೆ ನೀಡಲಾಗಿದೆ. ಜನ ಓಡಾಡಲು ಕೂಡ ಸಾಧ್ಯವಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯವರೇ ಆಗಿ ಇಲ್ಲಿನ ಸಮಸ್ಯೆ ಬಗೆಹರಿಸಲು ಆಗದ ಉಮೇಶ ಕತ್ತಿ ಅವರು ರಾಜ್ಯದ ಜನತೆಯನ್ನು ಹೇಗೆ ಕಾಪಾಡುತ್ತಿರಿ. ನಮ್ಮ ಗುರುಗಳಾದ ಸತೀಶ ಜಾರಕಿಹೊಳಿ ವಿರುದ್ಧ ಮಾತನಾಡಿದ್ದಿರಿ. ನಿಮ್ಮ ಸೋಲಿಸದೇ ನಾವು ಬಿಡೋದಿಲ್ಲ. ನಮಗೆ ಚಿರತೆ ಹಿಡಿಯಲು ಒಳಗಡೆ ಬಿಡಿ, ನಾವು ಚಿರತೆ ಹಿಡಿದು ತೋರಿಸುತ್ತೇವೆ. ಇಲ್ಲದಿದ್ರೆ ಇನ್ನು ಬರುವ 24 ಗಂಟೆಯಲ್ಲಿ ಚಿರತೆ ಹಿಡಿಯಬೇಕು ಎಂದು ಆಗ್ರಹಿಸಿದರು.  

ಇದೇ ವೇಳೆ ಇನ್ನೊರ್ವ ಕಾಂಗ್ರೆಸ್ ಮುಖಂಡೆ ತಬ್ಬಸುಮ್ ಮುಲ್ಲಾ ಮಾತನಾಡಿ, 22 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ ಆದರೂ ಚಿರತೆ ಹಿಡಿಯಲು ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ವಿಫಲವಾಗಿದೆ. ಅರಣ್ಯ ಇಲಾಖೆಯಲ್ಲಿ ಇರುವ ಗಂಡಸರಿಂದ ಚಿರತೆ ಹಿಡಿಯಲು ಆಗುತ್ತಿಲ್ಲ. ಹೀಗಾಗಿ ನಾವು ಹೆಣ್ಣು ಮಕ್ಕಳೇ ಚಿರತೆ ಹಿಡಿಯಬೇಕು ಎಂದು ಬಂದಿದ್ದೇವೆ. ನಾವು ಸಾವಿರಾರು ಮಹಿಳೆಯರು ಕಾಡಿನಲ್ಲಿ ಹೋಗಿ ಚಿರತೆ ಹಿಡಿಯುತ್ತೇವೆ. ಯಾರಿಗಾದರೂ ಜೀವಕ್ಕೆ ಅಪಾಯ ಆದರೆ ಯಾರು ಹೊಣೆ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.  

ಒಟ್ಟಾರೆ ಚಿರತೆ ವಿಷಯ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು. ಇತ್ತಿಚಿಗೆ ಯಮಕನಮರಡಿಯಲ್ಲಿ ಮಾರುತಿ ಅಷ್ಟಗಿ ಅಭಿನಂದನಾ ಸಮಾರಂಭದಲ್ಲಿ ಸಚಿವ ಉಮೇಶ ಕತ್ತಿ ಸತೀಶ ಜಾರಕಿಹೊಳಿ ಸೋಲಿಸುವುದಾಗಿ ಹೇಳಿದ್ದ ಮಾತಿಗೆ ಸತೀಶ ಬೆಂಬಲಿತರ ಮಹಿಳೆಯರು ತಿರುಗೇಟು ಕೊಟ್ಟಿದ್ದು ಈ ವೇಳೆ ಕಂಡು ಬಂದಿದೆ. 


ಸುದ್ದಿ ಓದಿ