ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರ ಭಕ್ತಿ ಮರೆಯಲಾಗದು : ಮಹೇಶ ಜಾಧವ
ಮಹಾಲಿಂಗಪುರ 20: ಹಿಂದುಸ್ತಾನದ ಇತಿಹಾಸದಲ್ಲಿ ಅನೇಕ ರಾಜರು ಆಡಳಿತ ಮಾಡಿದ್ದಾರೆ ಆದರೆ ಅವರ್ಯಾರು ದೇಶವನ್ನು ಒಗ್ಗೂಡಿಸಲು ಪ್ರಯತ್ನ ಮಾಡಲಿಲ್ಲ. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದರು. ಹಿಂದುಸ್ತಾನವನ್ನು ಒಗ್ಗೂಡಿಸಲು ಬಹಷ್ಟು ಶ್ರಮಿಸಿದರು. ಸಣ್ಣ ಸಣ್ಣ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತೆಗೆದುಕೊಂಡ ಶಿವಾಜಿ ಶೌರ್ಯ ಸಾಹಸ, ರಾಷ್ಟ್ರಭಕ್ತಿ ಎಂದು ಮರೆಯಲಾಗದು ಎಂದು ಸ್ಥಳೀಯ ಮರಾಠಾ ಸಮಾಜದ ಅಧ್ಯಕ್ಷ ಮಹೇಶ ಜಾಧವ ಹೇಳಿದರು.
ಪುರಸಭೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ ಹಿಂದೂ ಸ್ವರಾಜ್ಯದ ಸ್ಥಾಪಕರು. ಇವರು ಫೆೆ. 19 1630ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಜನಿಸಿದರು. ಇವರು 1674 ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು 1818 ರವರೆಗೂ ರಾರಾಜಿಸಿತು. ಶಿವಾಜಿಯ ಆಳ್ವಿಕೆಯು ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಓರಂಗಜೇಬ್ ಅದಿಲಶಾಹಿ ಮತ್ತು ಪೋರ್ಚುಗಿಸರ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳಿಂದ ಗುರುತಿಸಲ್ಪಟ್ಟಿದೆ. ಆವರು ಬಲವಾದ ಮತ್ತು ದಕ್ಷ ಆಡಳಿತವನ್ನು ಸ್ಥಾಪಿಸಿದರು. ಆವರ ಆಳ್ವಿಕೆಯನ್ನು ಮರಾಠರ ಇತಿಹಾಸದಲ್ಲಿ ಸುವರ್ಣಯುಗವೆಂದೆ ಪರಿಗಣಿಸಲಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ ಮಾತನಾಡಿ ಮಹಾರಾಷ್ಟ್ರದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ. ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು 17 ನೇ ಶತಮಾನದ ಮೊದಲಾರ್ಧದಲ್ಲಿ. ರಾಜ್ಯ ವಿಸ್ತರಣೆಯಲ್ಲಿ ಮೊಘಲರಿಗೂ ಬಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟಟು(1636) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು. ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು. ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಪುರಸಭೆ ಅಧಿಕಾರಿ ಎಸ್ ಏನ್ ಪಾಟೀಲ ಭಾರತ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ, ಧೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಮಹಾನ್ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜನ ಜನ್ಮದಿನವನ್ನು ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿಯಾಗಿ ಆಚರಿಸಲಾಗುತ್ತದೆ. ಶಿವಾಜಿ ಮಹಾರಾಜ ಮರಾಠ ಸಾಮ್ರಾಜ್ಯದ ಸ್ಥಾಪಕ ಮತ್ತು ಭಾರತದ ಪ್ರಗತಿಪರ, ಧೈರ್ಯಶಾಲಿ ಮತ್ತು ಬುದ್ಧಿವಂತ ರಾಜರಲ್ಲಿ ಒಬ್ಬರಾಗಿದ್ದರು ಎಂದರು.
ಬೈಕ ರಾಲಿ : ನಗರದ ಗಣೇಶ್ ಮಂದಿರದಿಂದ ಆರಂಭವಾದ ಬೈಕ್ ರಾಲಿ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ, ಬುದ್ನಿ, ಅಂಬೇಡ್ಕರ್ ವೃತ್ತ,ಬಸವೇಶ್ವರ ವೃತ್ತ, ಮಾರ್ಗವಾಗಿ ಸಾಗಿದ ರಾಲಿ ಎಪಿಎಂಸಿ ಹತ್ತಿರವಿರುವ ಶಿವಾಜಿ ಸರ್ಕಲ ತಲುಪಿ ವೃತ್ತದಲ್ಲಿರುವ ಶಿವಾಜಿ ಫೋಟೋಗೆ ಪೂಜೆ ಸಲ್ಲಿಸಲಾಯಿತು.
ಪುರಸಭೆ ಸಿಬ್ಬಂದಿಗಳಾದ ಎಂ.ಎಂ ಮುಗಳಖೋಡ, ಬಿ.ವಾಯ್. ಮರ್ಧಿ, ಎಸ್.ಜೆ ಕತ್ತಿ, ಎಂ.ಕೆ ದಳವಾಯಿ, ಎಸ್.ಜಿ ಅಳ್ಳಿಮಟ್ಟಿ, ಆರ್.ಕೆ ಮಾಂಗ, ಎಂ.ಪಿ ಮಾಂಗ, ಮರಾಠಾ ಸಮಾಜದ ಮುಖಂಡರಾದ ಅರ್ಜುನ ಮೋಪಗಾರ, ಆನಂದ ಪವಾರ, ನಾಗಪ್ಪ ಪವಾರ, ರಾಮಚಂದ್ರ ಪವಾರ, ಮಲ್ಲಪ್ಪ ಅಮ್ಮನ್ನಗೋಳ, ಮಹಾದೇವ ಸಾವಂತ ಸೇರಿದಂತೆ ನಗರದ ಗಣ್ಯಮಾನ್ಯರು ಸೇರಿ ಹಲವರು ಇದ್ದರು.