ಯರಗಟ್ಟಿ

ನಾರಾಯಣ ಗುರು, ನುಲಿಯಚಂದಯ್ಯ ಜಯಂತ್ಯೋತ್ಸವ ಆಚರಣೆ

ನಾರಾಯಣ ಗುರು, ನುಲಿಯಚಂದಯ್ಯ ಜಯಂತ್ಯೋತ್ಸವ ಆಚರಣೆ


ಯರಗಟ್ಟಿ, ಆ. 28: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ 172ನೇ ಹಾಗೂ ಶರಣ ನುಲಿಯಚಂದಯ್ಯ ಅವರ 919ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು.  

ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರು ನಾರಾಯಣ ಗುರು ಹಾಗೂ ನುಲಿಯಚಂದಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ನಂತರ ಮಾತನಾಡಿದ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ, ಒಂದೇ ದಿನ ಇಬ್ಬರು ಮಹಾನ್ ಶರಣರ ಜಯಂತಿಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ನುಲಿಯಚಂದಯ್ಯ ಅವರು ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಮಹಾನ್ ದಾರ್ಶನಿಕರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಬಸವಣ್ಣನವರ ತತ್ವಗಳ ಅಡಿಯಲ್ಲಿ ತಮ್ಮದೇ ಆದ ತತ್ವ-ಆದರ್ಶಗಳನ್ನು ಸಮಾಜಕ್ಕೆ ನೀಡಿದರು ಎಂದು ಹೇಳಿದರು.  

ಬ್ರಹ್ಮಶ್ರೀ ನಾರಾಯಣ ಗುರು ಅವರು ಕೇರಳದಲ್ಲಿ ಜನಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಎಲ್ಲ ಸಮುದಾಯಗಳ ಸಮಾನತೆಗಾಗಿ ದುಡಿದರು. ದೇವಾಲಯ ಪ್ರವೇಶ ಎಲ್ಲರಿಗೂ ಮುಕ್ತವಾಗಬೇಕು, ಪ್ರತಿಯೊಬ್ಬರೂ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಪಡೆಯಬೇಕು ಎಂಬ ಸಂಕಲ್ಪದೊಂದಿಗೆ ಹೋರಾಟ ನಡೆಸಿ ಸಮಾನತೆಯ ಸಂದೇಶ ಸಾರಿದರು ಎಂದು ತಿಳಿಸಿದರು.  

ಶರಣ ನುಲಿಯಚಂದಯ್ಯ ಅವರು ಸರಳ ಜೀವನ ನಡೆಸುತ್ತಾ ವಚನಗಳ ಮೂಲಕ ಸಹಬಾಳ್ವೆ, ಸಮಾನತೆ ಹಾಗೂ ಶ್ರಮದ ಬದುಕಿಗೆ ಮಹತ್ವ ನೀಡಿದ ಮಹಾನ್ ಶರಣರಾಗಿದ್ದಾರೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಶಿರಸ್ತೇದಾರ್ ಎಸ್‌.ಬಿ. ಕುಲಕರ್ಣಿ, ಉಪ ತಹಶೀಲ್ದಾರ್ ಎಸ್‌.ಎಸ್‌. ಜಾಧವ, ಪ.ಪಂ. ಮುಖ್ಯಾಧಿಕಾರಿ ಮಹೇಶ್ ಭಜಂತ್ರಿ, ಕಂದಾಯ ನೀರೀಕ್ಷಕ ವೈ.ಎಫ್‌. ಮುತೇನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್‌.ಬಿ. ದಹವಾಯಿ, ಸಮಾಜ ಮುಖಂಡರಾದ ಸುರೇಶ್ ಭಜಂತ್ರಿ, ಸತೀಶ ತಡಸಲೂರು, ಬಾಬು ಚನ್ನಮೇತ್ರಿ, ಫಿರೋಜ್ ಖಾದ್ರಿ, ಸ್ವರೂಪ ಚಪಳಿ, ವಿಜಯ ಉಪ್ಪಿನ, ಶಾಹೀನ್ ಮಿಶ್ರಕೋಟಿ, ಎಲ್‌.ಸಿ. ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ