ಮಹಲಿಂಗಪುರ

ಪಾಶ್ಚಾತ್ಯ ಸಂಸ್ಕೃತಿಯ ಹೊಸ ವರ್ಷದ ಬದಲಾಗಿ ಕಲ್ಪತರು ದಿನ ಆಚರಿಸಿ: ಶಿವಾನಂದ

ಪಾಶ್ಚಾತ್ಯ ಸಂಸ್ಕೃತಿಯ ಹೊಸ ವರ್ಷದ ಬದಲಾಗಿ ಕಲ್ಪತರು ದಿನ ಆಚರಿಸಿ: ಶಿವಾನಂದ


ಮಹಾಲಿಂಗಪುರ02: ಪಾಶ್ಚಾತ್ಯರ ಪರಿಕಲ್ಪನೆಯ ಹೊಸವರ್ಷ ಸಂಸ್ಕೃತಿಯ ಬದಲಾಗಿ ರಾಮಕೃಷ್ಣ ಪರಮಹಂಸರ ಕಲ್ಪತರು ದಿನಾಚರಣೆಯಿಂದ ಅವರ ಜ್ಞಾನ ಭಂಡಾರ, ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅನಾದಿ ಕಾಲದ ದೇಶಿ ಸಂಸ್ಕೃತಿಯನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ನವಚೇತನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು. 

ಸ್ಥಳೀಯ ಜೆಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಜನವರಿ 1ರ ಹೊಸ ವರ್ಷವನ್ನು ಬಹಿಷ್ಕರಿಸಿ ಹಮ್ಮಿಕೊಂಡಿದ್ದ ಕಲ್ಪತರು ದಿನಾಚರಣೆಯಲ್ಲಿ ಅವರು ಮಾತನಾಡಿದರು.  

ಕಳೆದ ಐದು ವರ್ಷಗಳಿಂದ ಜನೆವರಿ 1ರ ಹೊಸವರ್ಷವನ್ನು ಬಹಿಷ್ಕರಿಸಿ ಕಲ್ಪತರು ದಿನಾಚರಣೆ ಆಚರಿಸುತ್ತಾ ಮಕ್ಕಳಿಗೆ ರಾಮಕೃಷ್ಣ ಪರಮಹಂಸರ ಆಚಾರ-ವಿಚಾರ ಸಂಸ್ಕೃತಿ ಮೂಡಿಸುತ್ತಿರುವ ಸಂಸ್ಥೆ ಪ್ರಸಕ್ತ ವರ್ಷವೂ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 10 ನೇ ತರಗತಿ ಮಕ್ಕಳು ತಾವೇ ತಯಾರಿಸಿದ ಅನುಪಯುಕ್ತ ಕಬ್ಬಿಣದ ತುಂಡುಗಳಿಂದ ಶುದ್ಧ ಕುಡಿಯುವ ನೀರಿನ ಸ್ಟ್ಯಾಂಡ್ ಗಳನ್ನು ಹಾಗೂ ಬುದ್ಧ, ಬಸವಣ್ಣ, ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಮುಂತಾದ ಮಹನೀಯರ ಭಾವಚಿತ್ರಗಳನ್ನು ಶಿಕ್ಷಕರಿಗೆ ಮತ್ತು ಶಾಲೆಗೆ ಕಾಣಿಕೆಯಾಗಿ ನೀಡಿದ್ದು ಗಮನಸೆಳೆಯಿತು. 

ವಿದ್ಯಾರ್ಥಿಗಳು ಕಲ್ಪತರು ದಿನಾಚರಣೆಯ ಬಗ್ಗೆ ಮಾತನಾಡಿದರು.  

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ಆರ್‌.ಜಿ.ಮುಳವಾಡ, ಆರ್‌.ಎಂ.ಘಟ್ಟೆಪ್ಪನವರ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ, ಪತ್ರಕರ್ತ ನಾರನಗೌಡ ಉತ್ತಂಗಿ, ಶಿಕ್ಷಕರಾದ ಎಸ್‌.ಪಿ.ಸುತಾರ, ಮುತ್ತು ಅಂಗಡಿ, ಕಲ್ಮೇಶ ಮಟಗಾರ ಮತ್ತು ಗುರುವೃಂದದವರಿದ್ದರು.  

ಭೂಮಿಕಾ ಮತ್ತು ನಿಸರ್ಗ ಸ್ವಾಗತಿಸಿ, ವರ್ಷ ಮತ್ತು ದಾನೇಶ್ವರಿ ವಂದಿಸಿದರು, ಭಾಗ್ಯವಂತಿ, ಸಾಕ್ಷಿ, ಕೋಮಲ, ಅಮೃತ, ವರ್ಷ, ವೈಷ್ಣವಿ ಇತರರು ನಿರೂಪಿಸಿದರು.  


ಸುದ್ದಿ ಓದಿ