ವೀರಶೈವ-ಲಿಂಗಾಯತ ಸಮಾಜದ ಸಂಘಟನೆಗೆ ಕರೆ

ವೀರಶೈವ-ಲಿಂಗಾಯತ ಸಮಾಜದ ಸಂಘಟನೆಗೆ ಕರೆ

ಲೋಕದರ್ಶನ ವರದಿ 

ಸಾಗರ 8 : ವೀರಶೈವ-ಲಿಂಗಾಯತ ಧರ್ಮದ ಶಕ್ತಿ ದೊಡ್ಡದಾಗಿದ್ದು, ಸಮಾಜ ಬಾಂಧವರು ಒಗ್ಗಟ್ಟಾಗಿ ಒಳಪಂಗಡಗಳನ್ನು ಮರೆತು ಬದುಕುವುದು ಅಗತ್ಯ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಸಹಕಾರ್ಯದರ್ಶಿ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.  

ಪಟ್ಟಣದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ನಡೆದ ಸದ್ಬೋಧನಾ ಪಾದಯಾತ್ರೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಂಸ್ಥೆಯ ಕಾರ್ಯಕ್ರಮಕ್ಕೆ ಎಲ್ಲ ಪೂಜ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಗುವುದು ಎಂದರು.  

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಗಂಗಾ ಮಲಯ ಶಾಂತಮುನಿ ಶ್ರೀಗಳು ಐದು ಜಿಲ್ಲೆಗಳ ಪೂಜಾರಿಗಳು ನಡೆಸುತ್ತಿರುವ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಸೆಪ್ಟೆಂಬರ್ 26 ಮತ್ತು 27ರಂದು ಬೆಂಗಳೂರಿನಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರಂಭಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.  

ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಮಳಲಿ ಮಠದ ಡಾ. ನಾಗಭೂಷಣ ಶ್ರೀಗಳು ಮಾತನಾಡಿ, ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸದ್ಬೋಧನಾ ಪಾದಯಾತ್ರೆ ಸೇರಿದಂತೆ ಧರ್ಮ ಜಾಗೃತಿ ಕಾರ್ಯಕ್ರಮಗಳಿಗೆ ಸಾಗರ ತಾಲೂಕು ವೀರಶೈವ-ಲಿಂಗಾಯತ ಸಮಾಜ ನೀಡುತ್ತಿರುವ ಸಹಕಾರಕ್ಕೆ ಸಂತಸ ವ್ಯಕ್ತಪಡಿಸಿದರು.  

ಈ ಹಿಂದೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವತಿಯಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ ಹಾಗೂ ಹಾವೇರಿ ಜಿಲ್ಲೆಗಳ 18ಕ್ಕೂ ಹೆಚ್ಚು ಪೂಜ್ಯರ ನೇತೃತ್ವದಲ್ಲಿ ಸಿಗಂದೂರು ರಸ್ತೆಯಲ್ಲಿರುವ ಶ್ರೀ ರಾಮದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲಾಗಿತ್ತು. ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರನ್ನು ಉದ್ದೇಶಿಸಿ ಹಿರಿಯ ಪೂಜ್ಯರು ಧರ್ಮ ಸಂದೇಶ ನೀಡಿದರು.  

ನಂತರ ಬಳಸಗೋಡು ಕೇದಾರ ಪೀಠದ ಶಾಖೆ ಭೃಂಗೀಶ್ವರ ಮಠದ ಹಿರಿಯ ಪೂಜ್ಯರಾದ ಲಿಂಗ ನೀಲಕಂಠಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಕರ್ತೃಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ ಸಲ್ಲಿಸಿ ಪುಣ್ಯಸ್ಮರಣೆ ಮಾಡಲಾಯಿತು. ಬಳಸಗೋಡು ಮಠದ ಶ್ರೀಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಆಗಮಿಸಿದ ಪೂಜ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.  

ತೊಗರ್ಸಿ ಪಂಚವಣಿಗೆ ಮಠದ ಶ್ರೀಗಳು ಈ ಹಿಂದೆ ನಡೆದ ಪಾದಯಾತ್ರೆ ಹಾಗೂ ಆಂತರಿಕ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಮಂಡಿಸಿದರು. ವೀರಶೈವ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಆಯಾ ಜಿಲ್ಲೆಗಳ ಹಿರಿಯ ಪೂಜ್ಯರನ್ನು ಭೇಟಿ ಮಾಡಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.  

ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಮಾಜೋಧಾರ್ಮಿಕ ಚಿಂತನೆಗಳನ್ನು ಹಂಚಿಕೊಂಡರು.  ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಉಪಾಧ್ಯಕ್ಷ ಶಾಂತಪುರ ಶ್ರೀಗಳು, ಸಹ ಕಾರ್ಯದರ್ಶಿ ಕೋಣಂದೂರು ಶ್ರೀಗಳು ಸೇರಿದಂತೆ ವಿವಿಧ ಜಿಲ್ಲೆಗಳ ಮಠಾಧೀಶರು, ಪೂಜ್ಯರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ