ಸಮಯ ನಿಗದಿಯಾದರೆ ನಾಳೆಯೇ ದೆಹಲಿಗೆ ತೆರಳುವೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜು 29 ದೆಹಲಿ ನಾಯಕರ ಭೇಟಿಗೆ ಸಮಯ ಕೋರಿದ್ದೇನೆ. ಸಮಯ ನಿಗದಿಯಾದಲ್ಲಿ ಶುಕ್ರವಾರ ಬೆಳಗ್ಗೆಯೇ ದೆಹಲಿಗೆ ತೆರಳುವ ಆಲೋಚನೆಯಿದೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಮುಂಜಾನೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಗಾಗಿ ಹೊರಡುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿಗೆ ತೆರಳಿದಾಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪಕ್ಷದ ರಾಷ್ಟ್ರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಾಗುವುದು ಎಂದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರದ ವಿಳಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಜಿಎಸ್‌ಟಿ ಪರಿಹಾರದ ಈ ವರ್ಷ 18000 ಕೋಟಿ ಕೊರತೆ ಇದೆ. ಅದರ ಸಾಲವನ್ನು ಸೆಸ್ ಮೂಲಕ ತೀರಿಸುವ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ದೊರೆಯಬೇಕಾದ ಜಿಎಸ್‌ಟಿ ಪರಿಹಾರ ಮೊತ್ತ ಪಡೆಯಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ರಾಷ್ಟ್ರೀಯ ನಾಯಕರೊಂದಿಗಿನ ಮೊದಲನೇ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವುದಿಲ್ಲ. ಮುಂದಿನ ಸಭೆಯಲ್ಲಿ ಆ ಕುರಿತು ಚರ್ಚಿಸಲಾಗುವುದು ಎಂದರು.
ಸಚಿವ ಸ್ಥಾನ ಪಡೆಯಲು ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂಬ ವದಂತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದು ಸಹಜ ಪ್ರಕ್ರಿಯೆ. ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಇವೆಲ್ಲಾ ಸಾಮಾನ್ಯ ಎಂದು ಸಮಜಾಯಿಸಿ ನೀಡಿದರು.