58 ರೌಡಿಗಳ ಮನೆಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು,ಜು.23 ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ 58 ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಸುಲಿಗೆ, ಮೀಟರ್ ಬಡ್ಡಿ ದಂಧೆ, ಭೂ ಅಕ್ರಮ ಸೇರಿ ಆಸ್ತಿ ವಿವಾದಗಳಲ್ಲಿ ಸೆಟ್ಲಮೆಂಟ್ ಸೇರಿ ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದ್ದ 4 ರೌಡಿ ತಂಡಗಳನ್ನು ಗುರ್ತಿಸಿ 58 ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ್, ಸೈಕಲ್ ರವಿ, ಸೈಲೆಂಟ್ ಸುನೀಲ್ ಹಾಗೂ ಜೆಸಿಬಿ ನಾರಾಯಣ ಹಾಗೂ ಅವರ ಸಹಚರರು ಸೇರಿ 58 ಮನೆಗಳ ಮೇಲೆ ಪೊಲೀಸರು ದಾಳಿ ಕೈಗೊಂಡಿದ್ದರು.
ಮನೆ ಶೋಧನೆ ವೇಳೆ 28 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ 254 ಜನರ ಆಧಾರ ಕಾರ್ಡ್ ಗಳು ದೊರಕಿವೆ.ಅಲ್ಲದೇ, ಹಲವರ ಆಸ್ತಿ ದಾಖಲಾತಿ ಸೇರಿ 5 ಲಾಂಗ್ ಹಾಗೂ 2 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇಬ್ಬರೂ ಡಿಸಿಪಿ, 5 ಜನ ಎಸಿಪಿ ಹಾಗೂ 20 ಜನ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.