ಬಜೆಟ್ ಮಂಡನೆ: ಮೊದಲ ಸುತ್ತಿನ ಸಾರ್ವಜನಿಕ ಪೂರ್ವಭಾವಿ ಸಭೆ
ಮಹಾಲಿಂಗಪುರ : ಸ್ಥಳೀಯ ಪುರಸಭೆಯ 2022-23 ನೇ ಸಾಲಿನ ನಿಧಿ ಆಧಾರಿತ ಪದ್ಧತಿಯ ಬಜೆಟ್ ಮಂಡನೆ ಮೊದಲ ಸುತ್ತಿನ ಸಾರ್ವಜನಿಕ ಪೂರ್ವಭಾವಿ ಸಭೆ ಮಂಗಳವಾರ ಪುರಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿಯವರ ಅಧ್ಯಕ್ಷತೆಯಲ್ಲಿ ಜರುಗಿ, ಸಭಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಪಟ್ಟಣದ ಅನಧಿಕೃತ ನಳಗಳನ್ನು ಅಧಿಕೃತಗೊಳಿಸಿ ಮತ್ತು ಸೂಕ್ತ ದರ ನಿಗದಿ ಮಾಡಿ ನೀರು ಪೋಲಾಗುವುದನ್ನು ತಪ್ಪಿಸಿ ಪುರಸಭೆಗೆ ಆದಾಯ ಹೆಚ್ಚಿಸುವ ಸಲಹೆ ನೀಡಿದರು. ರಾಜು ಚಮಕೇರಿ, ನಗರದ ಅನಧಿಕೃತ ಅಂಗಡಿಗಳನ್ನು ಅಧಿಕೃತಗೊಳಿಸಿ ತೆರಿಗೆ ದರ ನಿಗದಿಗೊಳಿಸಿ ಪುರಸಭೆಗೆ ಇನ್ನೂ ಹೆಚ್ಚಿನ ಆದಾಯದ ಮೂಲ ಸಿಕ್ಕಂತಾಗುತ್ತದೆ ಮತ್ತು ನೂತನ ಕಟ್ಟಡಗಳ ಕಾಮಗಾರಿ ಪ್ರಮಾಣಪತ್ರ ಕೊಡುವಾಗ ಸಸಿಗಳ ನೆಡುವ ನಿಯಮ ಕಡ್ಡಾಯಗೊಳಿಸಿದರೆ ಪಟ್ಟಣ ಹಸಿರಿನಿಂದ ಕಂಗೊಳಿಸುತ್ತದೆ ಎಂದರು.
ಸಾರ್ವಜನಿಕರ ಸಲಹೆ ಸೂಚನೆ ಮತ್ತು ಮಾರ್ಗದರ್ಶನದ ಸಾರ್ವಜನಿಕ ಸಭೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಜಿ.ಎಸ್.ಗೊಂಬಿ ಮಾತನಾಡಿ, ನೀರಿನ ದುರ್ಬಳಕೆ, ಉದ್ಯಾನವನಗಳ ದುರುಸ್ಥಿ, ಕೆರೆ ಒತ್ತುವರಿ ತೆರವುಗೊಳಿಸಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದು ಹಾಗೂ ವಿದ್ಯಾರ್ಥಿ, ಸಂಘ ಸಂಸ್ಥೆಗಳ ಸಹಕಾರದಿಂದ ಹಸೀರೀಕರಣ, ಸ್ವಚ್ಛತೆ, ನೀರಿನ ಸದ್ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಸಲಹೆ ಕೊಟ್ಟರು.
ರಾಮಕೃಷ್ಣ ಹೆಗಡೆ ಪ್ರತಿಷ್ಠಾನದ ಅಧ್ಯಕ್ಷ ಸಿದ್ದು ಶಿರೋಳ ಮಾತನಾಡಿ, ಪುರಸಭೆ ಆಸ್ತಿಯ ಅತಿಕ್ರಮಣ ತಪ್ಪಿಸಿ ಸಂರಕ್ಷಿಸುವುದು, ಕಸವಿಲೇವಾರಿ, ಒಳಚರಂಡಿ, ನಗರದಲ್ಲಿ ಚತುಷ್ಪಥ ರಸ್ತೆ ನಿರ್ಮಾಣದಿಂದ ಜನದಟ್ಟಣೆ ಕಡಿಮೆ ಮಾಡುವ ಕುರಿತು ಮಾತನಾಡಿ ವೃತ್ತಗಳಲ್ಲಿ ಮಾರ್ಗಸೂಚಿ ಅಳವಡಿಸಲು ಕೋರಿದರು.
ಜೆಡಿಎಸ್ ಧುರೀಣ ಸುರೇಶ ಮಡಿವಾಳರ ಮಾತನಾಡಿ, ಹಿಂದೂ ರುದ್ರಭೂಮಿ ಒತ್ತುವರಿ ತೆರವುಗೊಳಿಸುವುದು, ನಗರದ ಎಲ್ಲ ರಸ್ತೆಗಳ ಪಕ್ಕದಲ್ಲಿ ಮಲಮೂತ್ರ- ವಿಸರ್ಜನೆ ನಿರ್ಮೂಲನೆ, ಸ್ವಾಮಿ ವಿವೇಕಾನಂದ ವೃತ್ತದ ಹೆಸರಿಕರಣ , ಸುಸಜ್ಜಿತ ಕ್ರೀಡಾಂಗಣ, ಗ್ರಂಥಾಲಯ ಮತ್ತು ಗೋಮಾಳ ಜಮೀನುಗಳ ಸಂರಕ್ಷಣೆಯ ಬಗ್ಗೆ ಮಾತನಾಡಿದರು.
ಮಹಿಳಾ ಸಂಘದ ಸುವರ್ಣ ಆಸಂಗಿ, ಪಟ್ಟಣದ ವಿದ್ಯುದ್ದೀಪ ಮತ್ತು ರಸ್ತೆಗಳಲ್ಲಿನ ಗುಂಡಿಗಳ ಬಗ್ಗೆ ಹಾಗೂ ಚರಂಡಿ ಸ್ವಚ್ಛತೆಯ ಬಗ್ಗೆ ಗಮನ ಸೆಳೆದರು.
ಪತ್ರಕರ್ತ ಮೀರಾ ತಟಗಾರ ಅವರು ಮಾತನಾಡಿ, ಐತಿಹಾಸಿಕ ಚನ್ನಗೀರೀಶ್ವರ ದೇವಸ್ಥಾನ ಮತ್ತು ಕೋಟೆಯ ಸಂರಕ್ಷಣೆ ಹಾಗೂ ಪುನರುಜ್ಜೀವನ ಹಾಗೂ ತರಕಾರಿ ಮಾರುಕಟ್ಟೆ ಸ್ವಚ್ಛತೆ ಮತ್ತು ಕ್ರೀಡಾಂಗಣಕ್ಕೆ ಶಾಸಕರಿಂದ 50 ಲಕ್ಷ ರೂಪಾಯಿಗಳ ಭರವಸೆಯ ಸದುಪಯೋಗದ ಬಗ್ಗೆ ಗಮನ ಸೆಳೆದರು.
ಮುಖ್ಯಾಧಿಕಾರಿ ಮಾತನಾಡಿ, ಎಲ್ಲ ವಿಷಯಗಳ ಕೂಲಂಕುಶ ಪರೀಶೀಲನೆ ಮತ್ತು ಅಗತ್ಯ ಕ್ರಮದ ಭರವಸೆ ನೀಡಿ ಸಾರ್ವಜನಿಕರ ಸಲಹೆಗೆ ಧನ್ಯವಾದ ತಿಳಿಸಿದರು.
ಶಿವಾನಂದ ಅಂಗಡಿ, ಬಸವರಾಜ ಹಿಟ್ಟಿನಮಠ,ಮಹಾಲಿಂಗಪ್ಪ ಮುದ್ದಾಪುರ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಭೀಮಶಿ ಗೌಂಡಿ, ಚನ್ನಪ್ಪ ರಾಮೋಜಿ, ಕಲ್ಲಪ್ಪ ಕಡಬಲ್ಲವರ ಹಾಗೂ, ಪುರಸಭಾ ಅಭಿಯಂತರ ಡಿ.ಬಿ.ಪಠಾಣ, ಎಸ್.ಎನ್.ಪಾಟೀಲ, ವಿ.ಜಿ.ಕುಲಕರ್ಣಿ, ನಾಮದೇವ ಲಮಾಣಿ, ರಾಜು ಹೂಗಾರ, ರಾಜೇಶ್ವರಿ ಸೋರಗಾವಿ, ಸಿಪಾಯಿ ರಾಮು ಇತರರು ಇದ್ದರು.
2022-23 ನೇ ಸಾಲಿನ ಪುರಸಭೆಯ ಬಜೆಟ್ ಮಂಡನೆಯ ಸಾರ್ವಜನಿಕ ಪೂರ್ವಭಾವಿ ಸಭೆ ಎರಡನೇ ಸುತ್ತು ಜನವರಿ 3 ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪುರಸಭಾ ಸಭಾಭವನದಲ್ಲಿ ನೆರವೇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಸಲಹೆ, ಸೂಚನೆ, ಮಾರ್ಗದರ್ಶನ ನೀಡಬೇಕಾಗಿ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ ಕೋರಿದ್ದಾರೆ.