ಬಿಡನ್ ಗೆದ್ದರೆ ಅಮೆರಿಕ ಭವಿಷ್ಯ ಮಣ್ಣುಪಾಲು: ಟ್ರಂಪ್ ಕಿಡಿ
ವಾಷಿಂಗ್ಟನ್, ಅಕ್ಟೋಬರ್ 16 :ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಬಿಡನ್ ಅತ್ಯಂತ 'ಕೆಟ್ಟ ಅಭ್ಯರ್ಥಿ' ಅವರು ಗೆದ್ದರೆ ದೇಶದ ಭವಿಷ್ಯ ಮಣ್ಣುಪಾಲಾಗಲಿದೆ ಎಂದು ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಾರೆ ಮುಂದಿನ ತಿಂಗಳ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡ್ ನಡುವೆ ನೇರ ಸ್ಪರ್ಧೆ ಎರ್ಪಟ್ಟಿದೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಕೆಟ್ಟ ಅಭ್ಯರ್ಥಿಯಾಗಿರುವವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅದು ನನ್ನ ಮೇಲೆ ಬಹಳ ಹೆಚ್ಚು ಒತ್ತಡ ಬೀರುತ್ತಿದೆ ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.
ಈ ಚುನಾವಣೆ ಸರಳ ಆಯ್ಕೆಯಾಗಿದೆ.ಬಿಡನ್ ಗೆಲುವು ಸಾಧಿಸಿದರೆ ಚೀನಾ ಗೆಲುವು ಸಾಧಿಸಿದಂತೆ, ಅದೇ ಟ್ರಂಪ್ ಗೆಲುವು ಸಾಧಿಸಿದರೆ ಉತ್ತರ ಕೆರೊಲಿನಾ ಹಾಗೂ ಅಮೆರಿಕ ಗೆಲುವು ಸಾಧಿಸಿದಂತೆ. ಬಿಡನ್ ಭ್ರಷ್ಟ ರಾಜಕಾರಣಿ ಎಂದು ಅಮೆರಿಕನ್ನರಿಗೆ ತಿಳಿದಿದೆ ಎಂದರು. ಬಿಡನ್ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಒಂದೊಮ್ಮೆ ಅವರು ಗೆದ್ದರೆ ಅಮೆರಿಕನ್ನರ ಉದ್ಯೋಗವನ್ನು ಚೀನಾ ವಶಪಡಿಸಿಕೊಂಡು ದೇಶವನ್ನು ಪರೋಕ್ಷವಾಗಿ ಚೀನಾ ಆಡಳಿತ ನಡೆಸಲಿದ್ದು, ದೇಶದ ಭವಿಷ್ಯವೇ ಮಣ್ಣು ಪಾಲಾಗಲಿದೆ ಎಂದರು. ಇನ್ನೊಂದೆಡೆ ಅವಧಿಗೂ ಮೊದಲೇ ಜನಗಣತಿ ನಿಲ್ಲಿಸಲು ಅಮೆರಿಕ ಸುಪ್ರೀಂಕೋರ್ಟ್ ಸಮ್ಮತಿ ನೀಡಿರುವುದು ಟ್ರಂಪ್ ಬಣಕ್ಕೆ ದೊಡ್ಡ ಗೆಲುವು ದೊರಕಿದಂತಾಗಿದೆ. ಜೊತೆಗೆ ಈ ಸಂಬಂಧ ನಡೆಯುತ್ತಿದ್ದ ಬಹುದಿನಗಳ ತಿಕ್ಕಾಟವೂ ಕೊನೆಯಾಗಿದೆ.