ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ : ಚುನಾವಣೆಯ ಸರಕಾರದ ದುಡ್ಡು, ದಾಖಲೆ ದೋಚಿದ ತಹಶಿಲ್ದಾರರ : ಗಡಾದ ಆರೋಪ

ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ : ಚುನಾವಣೆಯ ಸರಕಾರದ ದುಡ್ಡು, ದಾಖಲೆ ದೋಚಿದ ತಹಶಿಲ್ದಾರರ : ಗಡಾದ ಆರೋಪ

ಬೆಳಗಾವಿ, ಡಿ, 6 : ಬೆಳಗಾವಿಯ ಲೋಕಸಭೆ ಉಪಚುನಾವಣೆಗೆ ವೆಚ್ಚ ಮಾಡಿ ಬಾಕಿ ಉಳಿದ ಸರಕಾರದ ಹಣವನ್ನು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಈ ಹಿಂದಿನ ಬೆಳಗಾವಿ ತಹಶಿಲ್ದಾರರು ಹಾಲಿ ದಾಂಡೇಲಿ ತಹಶೀಲ್ದಾರರ ಮೇಲೆ ಹಾಗೂ ಈ ವಿಷಯ ಗೊತ್ತಿದ್ದರು ಸರಕಾರಕ್ಕೆ ವರದಿ ನೀಡದ ಬೆಳಗಾವಿ ಹಾಲಿ ತಹಶೀಲ್ದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಈ ಕುರಿತು ತನಿಖೆ ನಡೆಸದಿದ್ದರೆ ಕಾನೂನು ಹೋರಾಟ ಮಾಡುವದಾಗಿ ಗಡಾದ ಎಚ್ಚರಿಸಿದ್ದಾರೆ.

   ಈ ಕುರಿತು ಹೇಳಿಕೆ ನೀಡಿರುವ ಗಡಾದ ಅವರು, ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ  ಬೆಳಗಾವಿ ಲೋಕಸಭೆಯಉಪಚುನಾವಣೆಯ ಸಮಯದಲ್ಲಿ ಚುನಾವಣೆಯ ವೆಚ್ಚಕ್ಕಾಗಿ ಬೆಳಗಾವಿ ತಹಶೀಲ್ದಾರರಿಗೆ ಪ್ರತಿ ಮತಗಟ್ಟೆಗೆ 30 ಸಾವಿರ ರೂಗಳಂತೆ 353 ಮತಗಟ್ಟೆಗಳಿಗೆ ಒಟ್ಟು 1,05,90,000 ರೂಗಳನ್ನುದಿ: 12-04-2021ರಂದು ಜಿಲ್ಲಾಡಳಿತದಿಂದ ಬಿಡೆಗಡೆ ಮಾಡಲಾಗಿತ್ತು.

     ಈ ಚುನಾವಣೆಯ ವೆಚ್ಚಕ್ಕಾಗಿ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದ ಹಣವನ್ನು ಚುನಾವಣೆಯಸಮಯದಲ್ಲಿ ಬಳಕೆ ಮಾಡಲಾದ ಉದ್ದೇಶದ ವಿವರ ಹಾಗೂ ವೆಚ್ಚವಾದ ಒಟ್ಟು ಹಣದ ಮಾಹಿತಿ ನೀಡುವಂತೆ ದಿ. 05-07-2021ರಂದು  ತಹಶೀಲ್ದಾರರು ಬೆಳಗಾವಿ ಇವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.   ಈ ಮಾಹಿತಿಗೆ ಸಂಬಂಧಿಸಿದಂತೆ ದಿ. 26-07-2021ರಂದು ಲಿಖಿತ ಮಾಹಿತಿ ನೀಡಿರುವ ಬೆಳಗಾವಿ ತಹಶೀಲ್ದಾರರು “ಉಪಚುನಾವಣೆಯ ವೆಚ್ಚದ ದಾಖಲೆಗಳನ್ನು ಮತ್ತು ಉಳಿದಿದ್ದನಗದು ಮೊತ್ತವನ್ನು ಚುನಾವಣೆಯ ಸಮಯದಲ್ಲಿ ಕಾರ್ಯನಿರ್ವಹಿಸಿದ್ದ ದಾಂಡೇಲಿಯ ತಹಶೀಲ್ದಾರರು ತೆಗೆದುಕೊಂಡು ಹೋಗಿರುವರು ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದಲ್ಲದೆ ಈ ಕುರಿತು ಅವರಿಗೆ ಪತ್ರವನ್ನು ಸಹ ಬರೆದಿದ್ದಾರೆ.

   ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಬೆಳಗಾವಿ ಲೋಕಸಭೆಯ ಉಪಚುನಾವಣೆಗೆ ವೆಚ್ಚದ ಸಲುವಾಗಿ ಸರಕಾರ ನೀಡಿರುವ ಹಣದ ಲೆಕ್ಕ ಪತ್ರದ ವಿವರ ನೀಡದೇ ವೆಚ್ಚಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮತ್ತು ಬಾಕಿ ಉಳಿದ ಸರಕಾರದ ಹಣವನ್ನುತೆಗೆದುಕೊಂಡು ಹೋಗಿರುವುದು ದಾಂಡೇಲಿ ತಹಶೀಲ್ದಾರರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ. ಮತ್ತು 26-07-2021 ರಂದು ಇವರಿಗೆ ಪತ್ರ ಬರೆದಿದ್ದರೂ ಕೂಡಾ ಇದೂವರೆಗೂಅವರಿಂದ ಯಾವುದೇ ಪ್ರಕ್ರಿಯೆ ಬಾರದೇ ಇರುವದನ್ನು ನೋಡಿದರೆ ಇವರು ಸರಕಾರದ ಹಣವನ್ನು ತಿಂದು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

    ಅದರಂತೆ ಚುನಾವಣೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರರು ವೆಚ್ಚಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮತ್ತು ಬಾಕಿ ಉಳಿದ ಸರಕಾರದ ಹಣವನ್ನು ತೆಗೆದುಕೊಂಡು ಹೋಗಿರುವುದು ಸದ್ಯ ಬೆಳಗಾವಿ ತಹಶೀಲ್ದಾರರಿಗೆ ಗೊತ್ತಿದ್ದರು ಕೂಡಾ ಈ ಬಗ್ಗೆ ಮೇಲಾಧಿಕಾರಿಗಳಿಗೆ‌ ಹಾಗೂ ಸರಕಾರಕ್ಕೆ ವರದಿ ನೀಡದೇ ಇರುವುದ ಕೂಡಾ ಬೆಳಗಾವಿಯ ತಹಶೀಲ್ದಾರರ ಕರ್ತವ್ಯ ಲೋಪವೆಂದರೆ ತಪ್ಪಾಗಲಾರದು ಎಂದು ಭೀಮಪ್ಪ ಗಡಾದ ಅವರು ಹೇಳಿದ್ದಾರೆ.

  ದಾಂಡೇಲಿ ತಹಶೀಲ್ದಾರ ಇವರು ನಿಜವಾಗಿಯೂ ಕರ್ತವ್ಯಲೋಪ ವೆಸಗಿದ್ದಲ್ಲಿ ಹಾಗೂ ವಿಷಯ ಗೊತ್ತಿದ್ದರು ಕೂಡಾ ಬೆಳಗಾವಿ ತಹಶೀಲ್ದಾರರು ಸರಕಾರಕ್ಕೆ ವರದಿ ನೀಡದೇ ಭ್ರಷ್ಟಾಚಾರಕ್ಕೆ ಸಹಕರಿಸಿರುವುದರಿಂದ ಇವರ ಮೇಲೆ  ಕ್ರಮ ಕೈಕೊಳ್ಳುವುದು ಅವಶ್ಯವಿರುವುದು.ಕಾರಣ ದಾಖಲೆಗಳನ್ನು ಪರಿಶೀಲಿಸಿ ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳುವಂತೆ ಭೀಮಪ್ಪ ಗಡಾದ ಸರಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿ ಓದಿ