ಮಣ್ಣಲ್ಲಿ ಲೀನವಾಯಿತು ಉತ್ತರ ಕರ್ನಾಟಕದ ಧ್ವನಿ : ಹುಟ್ಟೂರಿನಲ್ಲಿ ಸಚಿವ ಉಮೇಶ ಕತ್ತಿಗೆ ಸರಕಾರಿ ಗೌರವ, ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತಿಮ ವಿಧಾಯ

ಮಣ್ಣಲ್ಲಿ ಲೀನವಾಯಿತು ಉತ್ತರ ಕರ್ನಾಟಕದ ಧ್ವನಿ : ಹುಟ್ಟೂರಿನಲ್ಲಿ ಸಚಿವ ಉಮೇಶ ಕತ್ತಿಗೆ ಸರಕಾರಿ ಗೌರವ, ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತಿಮ ವಿಧಾಯ

ಬೆಳಗಾವಿ, ಸೆ, 7 : ತೀವ್ರ ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ತಡರಾತ್ರಿ ವಿಧಿವಶವಾಗಿದ್ದ ಸಚಿವ ಉಮೇಶ ಕತ್ತಿ ಅವರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಲಿಂಗಾಯತ ಸಮುದಾಯದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರೆವೇರಿತು.


          ಬುಧವಾರ ಮಧ್ಯಾಹ್ನದ ವೇಳೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ಉಮೇಶ ಕತ್ತಿ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಬಳಿಕ ಅಲಂಕೃತ ಸೇನಾ ವಾಹನ ಒಂದರಲ್ಲಿ ಮೆರವಣಿಗೆ ಮೂಲಕ ಹುಕ್ಕೇರಿ ಪಟ್ಟಣದ‌ ಮೂಲಕ ತಮ್ಮ ಸ್ವಗ್ರಾಮವಾದ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಉಮೇಶ ಕತ್ತಿ ಅವರ ಒಡೆತನದ ವಿಶ್ವರಾಜ್ ಶುಗರ್ ಕಾರಖಾನೆಯ ಆವರಣದಲ್ಲಿ ಸಂಜೆ ಸಾರ್ವಜನಿಕರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇರಿಸಲಾಯಿತು.


     ಬಳಿಕ ವಿಶ್ವರಾಜ್ ಶುಗರ್ ಸಕ್ಕರೆ ಕಾರಖಾನೆಯ ಆವರದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರದ ಪಕ್ಕದಲ್ಲಿ ಸಚಿವ ಸಂಪುಟದ ಶೃದ್ದಾಂಜಲಿ ಸಭೆಯನ್ನು ಕೂಡಾ ಆಯೋಜನೆ ಮಾಡಲಾಗಿತ್ತು.


   ಇದೇ ವೇಳೆ ಪೊಲೀಸರಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಅರಣ್ಯ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಉಮೇಶ ಕತ್ತಿ ಅವರ ಧರ್ಮಪತ್ನಿಗೆ ರಾಷ್ಟ್ರದ ಧ್ವಜವನ್ನು ನೀಡಿದರು.


   ಉಮೇಶ ಕತ್ತಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ಬಳಿಕ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಕತ್ತಿ ಅವರ ತೋಟದಲ್ಲಿರುವ ಉಮೇಶ ಕತ್ತಿ ಅವರ ತಾತ ಹಾಗೂ ತಂದೆಯ ಸಮಾಧಿ ಬಳಿಯಲ್ಲಿ ಲಿಂಗಾಯತ ಧರ್ಮದ ಹಾಗೂ ಕುಟುಂಬದ ವಿಧಿವಿಧಾನಗಳ ಪ್ರಕಾರ ಸರಕಾರದ ಗೌರವಗಳೊಂದಿಗೆ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 


       ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶವಾಗಿರುವ ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಹುಕ್ಕೇರಿ ಮತಕ್ಷೇತ್ರದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು, ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಮೃತರಾಗಿರುವ ತಮ್ಮ ಕ್ಷೇತ್ರದ ಶಾಸಕರಿಗ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣದ ನಾಗರಿಕರು ಸಂಪೂರ್ಣ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಸಂತಾಪ ಸೂಚಿಸಿದರು. ಅಲ್ಲದೆ ಸಂಕೇಶ್ವರ ಪುರಸಭೆಯಲ್ಲಿ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಉಮೇಶ ಕತ್ತಿ ಅವರ ಭಾವಚಿತ್ರ ಪೂಜಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದರು.


     ಉಮೇಶ ಕತ್ತಿ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದೆ ಮಂಗಳಾ ಅಂಗಡಿ, ಮಾಜಿ‌ ಸಿಎಂಗಳಾದ ಸಿದ್ದರಾಮಯ್ಯ, ಬಿಎಸ್.ಯಡಿಯೂರಪ್ಪ, ಪುತ್ರ ಬಿ.ವೈ ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಅರಗ್ ಜ್ಞಾನೇಂದ್ರ, ಸಿ.ಸಿ.ಪಾಟೀಲ, ಕೋಟಾ ಶ್ರೀನಿವಾಸ ಪೂಜಾರಿ, ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳು, ನಿಡಸೋಸಿ ಶಿವಲಿಂಗೇಶ್ವರ ಶ್ರೀಗಳು, ಗದಗದ ಶ್ರೀಗಳು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಶ್ರೀ, ಶಾಸಕರಾದ ಸಿ.ಟಿ. ರವಿ, ಎಚ್.ಡಿ.ರೇವಣ್ಣ, ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲ, ಅಭಯ ಪಾಟೀಲ, ಅರವಿಂದ ಬೆಲ್ಲದ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ, ಪಿ.ರಾಜೀವ, ದುರ್ಯೋಧನ ಐಹೋಳೆ, ಪ್ರಕಾಶ ಹುಕ್ಕೇರಿ, ಸಂಸದ ಈರಣ್ಣ ಕಡಾಡಿ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಶಾಸಕರಾದ ರಾಜು ಕಾಗೆ, ಪೀರೋಜ್ ಶೆಟ್, ಶಶಿಕಾಂತ ನಾಯಿಕ, ಮಹಾಂತೇಶ ಕವಠಗಿಮಠ, ಅರವಿಂದ ಪಾಟೀಲ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 50 ಜನ ಮಠಾಧಿಪತಿಗಳು ಮತ್ತು ಕೆಲವು ಮಾಜಿ ಸಚಿವರು, ಶಾಸಕರು ಮುಖಂಡರು, ಕತ್ತಿ ಕುಟುಂಬಸ್ಥರು ಭಾಗವಹಿಸಿದ್ದರು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹಾಗೂ ಹೆಚ್ವುವರಿ ವರಿಷ್ಠಾಧಿಕಾರಿ ಮಾಹಾನಿಂಗ ನಂದಗಾವಿ ನೇತ್ರತ್ವದಲ್ಲಿ ಡಿಎಸ್ಪಿಗಳು, ಸಿಪಿಐಗಳು ಹಾಗೂ ಸಿಬ್ಬಂದಿಗಳು ಬಿಗಿಯಾದ ಬಂದೋಬಸ್ತ ಕಲ್ಪಸಿದ್ದರು. ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರು ಜಿಲ್ಲಾಡಳಿತ ವತಿಯಿಂದ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದರು.


ಉಮೇಶ ಕತ್ತಿ ನಮ್ಮ ಹಿರಿಯ ಅಣ್ಣನಾಗಿದ್ದ : ಯತ್ನಾಳ

    ಇದೇ ವೇಳೆ ಬಸನಗೌಡಾ ಪಾಟೀಲ ಅವರು ಶೃದ್ದಾಂಜಲಿ ಮಾತುಗಳಾನ್ನಾಡಿ, ಉಮೇಶ ಕತ್ತಿ ಅವರು ನಮ್ಮ ಹಿರಿಯ ಅಣ್ಣನಾಗಿದ್ದರು. ಮನಸ್ಸಿನಲ್ಲಿ ಕುತಂತ್ರ ದ್ವೇಷದ ರಾಜಕಾರಣಿಯಾಗಿರದೆ ಆದರ್ಶಮಯ ರಾಜಕಾರಣಿ ಆಗಿದ್ದರು. ಅಧಿವೇಶನ ವೇಳೆ ನಮ್ಮ ಊಟಕ್ಕೆ ಕರೆಯುತ್ತಿದ್ದರು. ಕೆಲವು ಬಾರಿ ನಮಗೆ ನಿಂದಿಸಿ, ಸರಿಯಾದ ಮಾರ್ಗದಲ್ಲಿ ಸಾಗುವಂತೆ ಸೂಚಿಸುತ್ತಿದ್ದರು. ಕತ್ತಿ ಅವರು ನಮ್ಮ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ಮಾಡುತ್ತಿದ್ದರು. ಅವರ ಅಗಲಿಕೆ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ಜನಪ್ರಿಯತೆ ಗಳಿಸಿದ್ದರಮೇಶಂದು ನುಡಿದರು.



 

ಸುದ್ದಿ ಓದಿ