ಬೆಳಗಾವಿಯ 10ನೇ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವ ನಿರ್ಣಯ : ಶಾಸಕರು, ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಲು ಸ್ಪೀಕರ್ ಕಾಗೇರಿ ಸೂಚನೆ

ಬೆಳಗಾವಿಯ 10ನೇ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವ ನಿರ್ಣಯ : ಶಾಸಕರು, ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಲು ಸ್ಪೀಕರ್ ಕಾಗೇರಿ ಸೂಚನೆ

ಬೆಳಗಾವಿ, ನ, 13 : ಡಿ. 19ರಿಂದ ಬೆಳಗಾವಿಯಲ್ಲಿ ಹತ್ತನೇ ಅಧಿವೇಶನ ನಡೆಯುತ್ತಿದೆ. ಏಳು ಅಧಿವೇಶನ ಸುವರ್ಣ ಸೌಧದಲ್ಲಿ ನಡೆದಿದ್ದು, ಎರಡು ಹೊರಗಡೆ ನಡೆಸಲಾಗಿರುತ್ತದೆ. ಈ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕರನ್ನು ಆಯ್ಕೆಗೆ ತೀರ್ಮಾನಿಸಲಾಗಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುವುದು. ಸಚಿವರು, ಶಾಸಕರು ಕಡ್ಡಾಯವಾಗಿ ಸದನದಲ್ಲಿ ಹಾಜರಿ ಇರುವಂತೆ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಮಾಡಿದರು.

      ವಿಧಾನ ಮಂಡಳದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಶಾಸಕರ ಆಯ್ಕೆ ಸಮಿತಿಯು ನೀಡುವ ವರದಿ ಆಧರಿಸಿ ಅತ್ಯುತ್ತಮ ಶಾಸಕ ಒಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅದರಂತೆ  ಬೆಳಗಾವಿ ಅಧಿವೇಶನದಲ್ಲಿ 6 ಮಸೂದೆಗಳನ್ನು ತರಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಚರ್ಚಿಸಿ ಅವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ ನಾಲ್ಕು ಹೊಸ ವಿಧೇಯಕಗಳು ಬಂದಿರುತ್ತವೆ. ಬೇರೆ ಯಾವುದೇ ವಿಧೇಯಕ ಇದ್ದರೆ ಸರಕಾರ ಅವುಗಳನ್ನು ಮಂಡಿಸಲಿದೆ. ಮೊದಲ ದಿನ ವಿಧಾನ ಸಭೆ ಉಪಾಧ್ಯಕ್ಷ ಆನಂದ ಮಾಮನಿ, ಉಮೇಶ ಕತ್ತಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

     ಸಮಗ್ರ ಕರ್ನಾಟಕದ ಜತೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಸೂಕ್ತ ದಿನಗಳನ್ನು ನಿಗದಿಪಡಿಸಲಾಗುವುದು. ಅಧಿವೇಶನ ಹೊರತುಪಡಿಸಿ ಉಳಿದ ಅವಧಿಯಲ್ಲಿ ಸುವರ್ಣ ವಿಧಾನಸೌಧ ಸದ್ಬಳಕೆ ಅಗಬೇಕು. ಇಡೀ ವರ್ಷ ಕಟ್ಟಡದಲ್ಲಿ ಲವಲವಿಕೆಯಿಂದ ಚಟುವಟಿಕೆಗಳು ನಡೆಯಬೇಕು ಎಂಬ ಅಭಿಪ್ರಾಯಗಳಿವೆ. ಶಾಸಕರ ಭವನ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಧಿವೇಶನದ ಕಲಾಪಗಳಲ್ಲಿ ಸಚಿವರು ಮತ್ತು ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ಅನುಮತಿ ಮೇರೆಗೆ ಕಲಾಪಗಳ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದರು.

   ಕೆಲವು ಶಾಸಕರು ಸದನದಲ್ಲಿ ನಾನು ಭಾಗವಹಿಸುವುದಿಲ್ಲ ಎಂಬ ಹೇಳುವ ಮಾತುಗಳನ್ನು ನಾನು ಒಪ್ಪುವುದಿಲ್ಲ. ಪ್ರಜಾಸಂಸದೀಯ ಪಾವಿತ್ರ್ಯತೆ ಕಾಪಾಡಲು ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು. ಜನರ ಆಶಯಗಳನ್ನು ಈಡೇರಿಸುವ ಸಂಸದೀಯ ಮಾರ್ಗ ಅಧಿವೇಶನದ ಉದ್ದೇಶವಾಗಿರುತ್ತದೆ. ಆದ್ದರಿಂದ ಜನರ ಭಾವನೆಗಳಿಗೆ ಸ್ಪಂದಿಸಿ ಎಲ್ಲರೂ ಸದನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು. 

   ಅದರಂತೆ ಅಧಿವೇಶಕ್ಕೆ ಬರುವ ಸಚಿವರು, ಶಾಸಕರಿಗೆ, ಅಧಿಕಾರಿಗಳಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿದಾಗ ಇಡೀ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಉನ್ನತಮಟ್ಟದ ಅಧಿಕಾರಿಗಳು ಸೇರಿದಂತೆ ಇಡೀ ವ್ಯವಸ್ಥೆಯೇ ಇಲ್ಲಿ ಇರುವುದರಿಂದ ವಸತಿ, ಊಟೋಪಹಾರದ ಅತ್ಯುತ್ತಮ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

    ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಆಗಮಿಸುವುದರಿಂದ ಸರಳ ರೀತಿಯ ಹಾಗೂ ಗುಣಮಟ್ಟದ ಆಹಾರವನ್ನು ಕಲ್ಪಿಸಬೇಕು. ಸಾರಿಗೆ ವ್ಯವಸ್ಥೆಯು ಪ್ರಮುಖವಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯರು ಮತ್ತು ಸಿಬ್ಬಂದಿ ತಂಡವನ್ನು ನಿಯೋಜಿಸಬೇಕು. ಅಗತ್ಯಬಿದ್ದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಕೋವಿಡ್ ಇಲ್ಲದಿರುವುದರಿಂದ ಈ ಬಾರಿ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದ್ದರಿಂದ ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಮಸೂದೆ ಅಂಗೀಕಾರ ಸೇರಿದಂತೆ ಕಲಾಪದ ಎಲ್ಲ ಚಟುವಟಿಕೆಗಳು ಯಥಾ ಪ್ರಕಾರ ನಡೆಯಲಿವೆ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗುವುದು. ಪ್ರವೇಶದ್ವಾರದ ಬಳಿ ಅಗತ್ಯ ಗುರುತಿನ ಚೀಟಿಯನ್ನು ನೀಡಿ ಪ್ರವೇಶ ಕಲ್ಪಿಸಲಾಗುತ್ತದೆ.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೆÇಲೀಸ್ ಆಯುಕ್ತರಿಗೆ ಸಭಾಧ್ಯಕ್ಷರಾದ ಕಾಗೇರಿ ಅವರು ನಿರ್ದೇಶನ ನೀಡಿದರು. 

     ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುವುದರಿಂದ ಅವರಿಗೂ ಕೂಡ ಉತ್ತಮ ಊಟೋಪಹಾರ ಕಲ್ಪಿಸಬೇಕು. ಜನರ ಅಪೇಕ್ಷೆಯಂತೆ ಉತ್ತಮ ರೀತಿಯಲ್ಲಿ ಅಧಿವೇಶನ ನಡೆಸುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮನ್ನು ನಾವು ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಸಭಾಧ್ಯಕ್ಷರಾದ ಕಾಗೇರಿ ಹೇಳಿದರು.

ಅಧಿವೇಶನಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಅಥವಾ ತಾಂತ್ರಿಕ ತೊಂದರೆಗಳು ಇದ್ದಲ್ಲಿ ಇಲಾಖೆಗಳ ಮುಖ್ಯಸ್ಥರಿಗೆ ವರದಿ ನೀಡಬೇಕು. ಇದರಿಂದ ಸೂಕ್ತ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು. 

     ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿವೇಶನ ಸಿದ್ಧತೆಗಾಗಿ ವಿವಿಧ ಸಮಿತಿಗಳ ರಚನೆ ಹಾಗೂ ಅವುಗಳ ಕಾರ್ಯನಿರ್ವಹಣೆ ಮತ್ತು ಸಿದ್ಧತೆಗಳ ಕುರಿತು ಮಾಹಿತಿಯನ್ನು ನೀಡಿದರು. ಪ್ರತಿಯೊಂದು ವಸತಿಗೃಹಗಳಿಗೆ ಹಾಗೂ ಸಚಿವರುಗಳಿಗೆ ಸಂಪರ್ಕಾಧಿಕಾರಿಗಳನ್ನು ನಿಯೋಜಿಸಲಾಗಿದೆ. ವೈದ್ಯಕೀಯ ತಪಾಸಣೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು 16 ಕಡೆಗಳಲ್ಲಿ ಪ್ರತ್ಯೇಕ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

      ಭದ್ರತೆ ಹಾಗೂ ಪಾರ್ಕಿಂಗ್ ಮತ್ತಿತರ ವಿಷಯಗಳ ಕುರಿತು ಪೆÇಲೀಸ್ ಆಯುಕ್ತರಾದ ಎಂ.ಬಿ.ಬೋರಲಿಂಗಯ್ಯ ಅವರು ಮಾಹಿತಿಯನ್ನು ನೀಡಿದರು. ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ