ಹಿರಣ್ಯಕೇಶಿಯಲ್ಲಿ ರುಂಡವಿಲ್ಲದ ಬಾಲಕನ ಮುಂಡ ಪತ್ತೆ ಪ್ರಕರಣ : ಶವದ ಕೊರಳಿನ ಟಾಯ್ ನೀಡಿತು ಪೊಲೀಸರಿಗೆ ಹತ್ಯೆಯ ಸಾಕ್ಷಿ : ಪೊಲೀಸ ತಂಡವನ್ನು ಶ್ಲಾಘಿಸಿದ ಎಸ್.ಪಿ
ಬೆಳಗಾವಿ, ಸೆ, 28 : ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿಯ ಹಿರಣ್ಯಕೇಶಿ ನದಿಯಲ್ಲಿ ರುಂಡ ಇಲ್ಲದ ಪತ್ತೆಯಾದ 11 ವರ್ಷದ ಬಾಲಕನ ಶವದ ಪ್ರಕರಣವನ್ನು ಕೇವಲ ಬಾಲಕನ ಶವದ ಮೇಲಿದ್ದ ಟಾಯ್ ಆಧಾರದ ಮೇಲೆ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದು, ಸಾಕ್ಷಿಗಳನ್ನು ಡ್ರೋಣ ಮೂಲಕ ಪತ್ತೆ ಮಾಡಿ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದ್ದಾರೆ.

ಮಂಗಳವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಹುಕ್ಕೇರಿ ಪೊಲೀಸ ಠಾಣಾ ವ್ಯಾಪ್ತಿಯ ಗುಡಸ ಗ್ರಾಮದ ಬಳಿಯ ಹಿರಣ್ಯಕೇಶಿ ನದಿ ನೀರಲ್ಲಿ ಸುಮಾರು 11 ವರ್ಷದ ಬಾಲಕನ ರುಂಡವಿಲ್ಲದ ಶವ ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿದ ವೇಳೆ ಇದು ಹತ್ಯೆ ಮಾಡಿರುವ ಪ್ರಕರಣ ಎಂಬುದು ಬೆಳಕಿಗೆ ಬಂದಿತು ಎಂದು ತಿಳಿಸಿದರು. ಅದರಂತೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕನ ಕಾಣೆ ಪ್ರಕರಣಕ್ಕೆ ಇದು ಹೊಂದಾಣಿಕೆಯಾಗಿರುವುದು ಕಂಡುಬಂದಿತು. ಅಲ್ಲದೆ ಬಾಲಕನ ಶವಕ್ಕೆ ಮುಖ ಹಾಗೂ ಯಾವ ಸಾಕ್ಷಿ ಸಿಗದ ಹಾಗೆ ಹತ್ಯೆ ಮಾಡಿ ಎಸೆಯಲಾಗಿತ್ತು. ಈ ಬಾಲಕನ ಹತ್ಯೆ ಪ್ರಕರಣವನ್ನು ಬೇಧಿಸಲು ಎರಡು ಪ್ರತ್ಯೇಕ ಪೊಲೀಸರ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಈ ತನಿಖಾ ತಂಡವು ಬಾಲಕನ ಶವದ ಮೇಲೆ ಟಾಯ್ ದೊರೆತ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಬಯಲಿಗೆ ತರಲು ಅನುಕೂಲವಾಯಿತು. ಬಳಿಕ ಸಂಶಯಿತ ಆರೋಪಿಯನ್ನು ಹುಕ್ಕೇರಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ಬಾಲಕನನ್ನು ಹತ್ಯೆ ಮಾಡಿರುವದು ಬೆಳಕಿಗೆ ಬಂದಿದ್ದು, ಈ ಕೊಲೆಯನ್ನು ತಾವೇ ಮಾಡಿರುವದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಸಂಜೀವ ಪಾಟೀಲ ಅವರು ಹೇಳಿದರು.
ಬಾಲಕನ ಹತ್ಯೆ ಪ್ರಕರಣದಲ್ಲಿ ಹುಕ್ಕೇರಿ ತಾಲೂಕಿನ ಹೊಸೂರಿನ ನೂರುದ್ದೀನ ಕೊಣ್ಣೂರು ಹಾಗೂ ಹನುಮಂತ ದೇವನೂರ ಬಂಧಿತ ಆರೋಪಿಗಳಾಗಿದ್ದಾರೆ. ನೂರುದ್ದೀನ ಈತ ಬಾಲಕನ ರುಂಡ ಕತ್ತರಿಸಿ ಯಾವದೇ ಸಾಕ್ಷಿ ಸಿಗದಂತೆ ಹತ್ಯೆ ಮಾಡಿದ್ದಾನೆ. ಬಾಲಕನ ಸೈಕಲ್‌ನ್ನು ಬಾವಿಗೆ ಎಸೆದು, ಮೈಮೇಲೆ ಯಾವ ಸಾಕ್ಷಿ ಸಿಗದ ಹಾಗೆ ಬಟ್ಟೆಗಳನ್ನು ಹರಿದು ಹಾಕಿ ಈ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ತನ್ನ ಸ್ನೇಹಿತ ಹನುಮಂತನ ಸಹಾಯ ಪಡೆದಿದ್ದ ಎಂದರು.
ಈ ಬಾಲಕನ ಹತ್ಯೆ ಪ್ರಕರಣ ಬೇಧಿಸುವಲ್ಲಿ ಗೋಕಾಕ ಡಿವೈಎಸ್ಪಿ ಮನೋಜಕುಮಾರ ನಾಯಿಕ, ಹುಕ್ಕೇರಿ ಸಿಪಿಐ ಮಹ್ಮದರಫೀಕ್ ತಹಶಿಲ್ದಾರ, ಸಂಕೇಶ್ವರ ಸಿಪಿಐ ಪ್ರಹ್ಲಾದ ಚೆನ್ನಗೀರಿ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ ಇವರ ತಂಡವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರನ್ನು ಎಸ್ಪಿ ಡಾ. ಸಂಜೀವ ಪಾಟೀಲ ಅಭಿನಂದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ವುವರಿ ಎಸ್ ಪಿ ಮಹಾನಿಂಗ ನಂದಗಾವಿ ಉಪಸ್ಥಿತರಿದ್ದರು.
ಹತ್ಯೆ ಆಗಿರುವ ಬಾಲಕನ ಹೆಸರು ಮಲ್ಲಪ್ಪ ಮಾನೆ (ಸಾ : ನಾಯಿಂಗ್ಲಜ್) ಕೊಲೆಯಾದ ದುರ್ದೈವಿಯಾಗಿದ್ದಾನೆ. ಈತ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದು ಶಾಲೆ ಕಲಿಯುತ್ತಿದ್ದನು ಎಂದು ಹೇಳಲಾಗಿದೆ.