ಕರಾಳವಾದ ಮಹಾಲಯ ಅಮವಾಸ್ಯೆ : ಬೂದಿಗೊಪ್ಪ ಬಳಿ ಕಾರು, ಲಾರಿ ನಡುವೆ ರಸ್ತೆ ಅಪಘಾತ ನಾಲ್ವರು ಸಾವು : ಕೆಲವರಿಗೆ ಗಂಭೀರ ಗಾಯ
ಬೆಳಗಾವಿ, ಸೆ, 25 : ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಡಚಿ ಎಎಸ್ ಐ ಅವರ ಕುಟುಂಬಸ್ಥರು ಮತ್ತು ಕಾರಿನ ಚಾಲಕ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ರವಿವಾರ ನಡೆದಿದ್ದು, ಅಮವಾಸ್ಯೆಯ ದಿನವಾದ ರವಿವಾರ ಕರಾಳ ದಿನವಾಗಿ ಮಾರ್ಪಟ್ಟಿದೆ.

ಈ ಘಟನೆಯಲ್ಲಿ ನಿಖಿಲ್ ಕದಂ(24), ಎಎಸ್ಐ ಪತ್ನಿ ರುಕ್ಮಿಣಿ ಹಲಕಿ(48), ಅಕ್ಷತಾ ಹಲಕಿ(22), ಹನಮವ್ಚ ಚಿಕ್ಕಲಕಟ್ಟಿ(65) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.
ಬೆಳಗಾವಿಯಿಂದ ಯರಗಟ್ಟಿ ಕಡೆಗೆ ಹೊರಟಿದ್ದ ಕಾರು ಹಾಗೂ ಲೋಕಾಪುರ ದಿಂದ ಗೋವಾಕ್ಕೆ ಸಿಮೆಂಟ್ ಚೀಲಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅದರಂತೆ ಯರಗಟ್ಟಿ ಕಡೆಗೆ ಹೊರಟಿದ್ದ ಬೈಕಿಗೂ ಲಾರಿಯು ಗುದ್ದಿದ್ದು, ಬೈಕಿನ ಮೇಲಿದ್ದ ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಜಿಲ್ಲೆಯ ಕುಡಚಿ ಎಎಸ್ಐ ಪರುಶರಾಮ ಹಲಕಿ ಪತ್ನಿ, ಪುತ್ರಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತದಿಂದ ರಾಜ್ಯ ಹೆದ್ದಾರಿ ಮೇಲೆ ಸಂಚಾರದಲ್ಲಿ ವ್ಯಥ್ಯಯ. ಉಂಟಾಗಿತ್ತು. ಸ್ಥಳಕ್ಕೆ ಮುರಗೋಡ, ನೇಸರಗಿ, ಯರಗಟ್ಟಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.