ಶಾಸಕಿ ಹೆಬ್ಬಾಳಕರ್ ವಿರುದ್ದ ರಮೇಶ ಜಾರಕಿಹೊಳಿ ಕೆಟ್ಟ ಹುಳ ಪದ ಬಳಕೆ : ಕ್ಷಮೆಯಾಚನೆಗೆ ಪಂಚಮಸಾಲಿ ಮುಖಂಡರ ಒತ್ತಾಯ
ಬೆಳಗಾವಿ, ಜ, 23 : ಸುಳೇಭಾವಿಯಲ್ಲಿ ಮೊನ್ನೆ ನಡೆದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳ ಸಮಾವೇಶದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ವಿರುದ್ದ ಕೆಟ್ಟ ಹುಳು ಎಂಬ ಪದ ಬಳಕೆ ಮಾಡಿದ್ದು ಅವನ್ನು ವಾಪಸ್ ಪಡೆಯುವಂತೆ ಹಾಗೂ ಕ್ಷಮೆಯಾಚನೆ ಮಾಡುವಂತೆ ಪಂಚಮಸಾಲಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಬೆಳಿಗ್ಗೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳೇಭಾವಿಯಲ್ಲಿ ಇತ್ತಿಚೆಗೆ ನಡೆದ ಸಮಾವೇಶದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ವಿರುದ್ದ ಥೂ ಥೂ,,, ಥೂ... ಎಂದು ಛೀಮಾರಿ ಹಾಕಿರುವದು ಹಾಗೂ ಕೆಟ್ಟ ಹುಳ ಎಂದು ಸಂಭೋಧಿಸಿರುವದು ರಮೇಶ ಜಾರಕಿಹೊಳಿ ಅವರ ಘಟನೆ ಗೌರವಕ್ಕೆ ಶೋಭೆ ತರುವ ಕೆಲಸವಲ್ಲ.
ಅವರು ಒಂದು ಸುಸಂಸ್ಕೃತ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿ ಇದ್ದವರು, ಸ್ತ್ರೀ ಕುಲದ ಬಗ್ಗೆ ಗೌರವ ಇರುವ ಪಕ್ಷದಲ್ಲಿ ಇದ್ದವರಾಗಿದ್ದಾರೆ. ಅದನ್ನು ಅರಿತು ಮಾತನಾಡದೆ. ಶಾಸಕಿ ಹೆಬ್ಬಾಳಕರ್ ಅವರ ವಿರುದ್ದ ಹಗುರವಾಗಿ ಮಾತನಾಡಿರುವದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ವಿಜಯಪುರ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಅವರು ಶಾಸಕಿ ಹೆಬ್ಬಾಳಕರ್ ಅವರ ವಿರುದ್ದವಾಗಿ ಕೆಟ್ಟ ಪದ ಬಳಸಿ ಮಾತನಾಡಿದ್ದಾಗ ಅದನ್ನು ನೀವು ಯಾಕೆ ಖಂಡಿಸಲಿಲ್ಲ. ಅವರು ನಿಮ್ಮ ಸಮಾಜದವರು ಅಂದ ಮಾತ್ರಕ್ಕೆ ಖಂಡನೆ ಇಲ್ಲವಾ, ಶಾಸಕ ರಮೇಶ ಜಾರಕಿಹೊಳಿ ಅವರು ಪರಿಶಿಷ್ಟ ಜಾತಿಯವರು ಎನ್ನುವ ಕಾರಣದಿಂದ ಅವರ ವಿರುದ್ದ ಖಂಡನೆ ನಡೆದಿದೆನಾ ಎಂಬ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖಂಡರು, ಹಾಗೇನಿಲ್ಲ. ನಾವು ಆವಾಗ ಅದನ್ನು ಗಮನಿಸಿರಲಿಲ್ಲ. ಅದು ನಮ್ಮ ಗಮನಕ್ಕೆ ಬಂದಿರಲಿಲ್ಲ ಎನ್ನು ಹಾರಿಕೆ ಉತ್ತರ ಮತ್ತು ಸಬೂಬು ನೀಡಿದರು.